ರಾಷ್ಟ್ರಪತಿ ಆಗುವ ಅವಕಾಶವನ್ನು ನಿರಾಕರಿಸಿದ್ದ ಅಟಲ್ ಬಿಹಾರಿ ವಾಜಪೇಯಿ
Photo : Image Source : PTI
ಹೊಸದಿಲ್ಲಿ: ತಮ್ಮ ತಂಡದ ಸಲಹೆಯ ಹೊರತಾಗಿಯೂ ರಾಷ್ಟ್ರಪತಿಯಾಗುವ ಅವಕಾಶವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿರಾಕರಿಸಿದ್ದರು ಎಂಬ ಸಂಗತಿ ಅವರ ಮಾಧ್ಯಮ ಸಲಹೆಗಾರರ ನೂತನ ಕೃತಿಯಲ್ಲಿ ಬಹಿರಂಗವಾಗಿದ್ದು, ಅಂತಹ ಯಾವುದೇ ನಡೆಯು ಭಾರತದ ಸಂಸದೀಯ ಪ್ರಜಾಸತ್ತೆಯನ್ನು ಹೂತು ಹಾಕಲಿದ್ದು, ಮುಂದಿನ ನಾಯಕರ ಪಾಲಿಗೆ ಅಪಾಯಕಾರಿ ನಿದರ್ಶನವಾಗಲಿದೆ ಎಂದು ಅವರು ಹೇಳಿದ್ದರು ಎಂದು ಆ ಕೃತಿಯಲ್ಲಿ ಹೇಳಲಾಗಿದೆ ಎಂದು ndtv.com ವರದಿ ಮಾಡಿದೆ.
1998-2004ರ ನಡುವೆ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಮಾಧ್ಯಮ ಸಲಹೆಗಾರರಾಗಿದ್ದ ಅಶೋಕ್ ಟಂಡನ್, 2002ರಲ್ಲಿ ಕೆ.ಆರ್.ನಾರಾಯಣನ್ ಅವರ ರಾಷ್ಟ್ರಪತಿ ಅವಧಿ ಮುಕ್ತಾಯಗೊಂಡ ನಂತರ ಆ ಸ್ಥಾನಕ್ಕೆ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಹೆಸರನ್ನು ಸೂಚಿಸಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎಂದು ತಮ್ಮ ನೂತನ ಕೃತಿ “ದ ರಿವರ್ಸ್ ಸ್ವಿಂಗ್: ಕಲೋನಿಯಲ್ ಟು ಕೋ-ಆಪರೇಷನ್”ನಲ್ಲಿ ಬಹಿರಂಗಗೊಳಿಸಿದ್ದಾರೆ. ಈ ಶಿಫಾರಸು ಕಾಂಗ್ರೆಸ್ ನಾಯಕರ ಅಚ್ಚರಿಗೆ ಕಾರಣವಾಯಿತಾದರೂ, ಸಮಾಜವಾದಿ ಪಕ್ಷವು ಈ ಉಪಾಯವನ್ನು ಅನುಮೋದಿಸಿದ್ದರಿಂದ ಎಲ್ಲ ಪಕ್ಷಗಳೂ ಸಹಮತಕ್ಕೆ ಬಂದವು ಎಂದು ಆ ಕೃತಿಯಲ್ಲಿ ಹೇಳಲಾಗಿದೆ.
“ಡಾ. ಕಲಾಂ ನನ್ನ ಆಯ್ಕೆ” ಎಂದು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಹೇಳಿದ್ದರು ಎಂದು ಆ ಕೃತಿಯಲ್ಲಿ ಉಲ್ಲೇಖಿಸಲಾಗಿದೆ.
ಆ ಕೃತಿಯ ಅಧ್ಯಾಯವೊಂದರಲ್ಲಿ, ವಾಜಪೇಯಿ ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಬೇಕು ಹಾಗೂ ಎಲ್.ಕೆ.ಅಡ್ವಾಣಿ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂದು ಅವರ ತಂಡವು ಸಲಹೆ ನೀಡಿತ್ತು. ಆದರೆ, ಈ ಸಲಹೆಯನ್ನು ಒಪ್ಪದ ವಾಜಪೇಯಿ, ಪ್ರಧಾನಿಯೊಬ್ಬರು ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾದರೆ, ವಿಶೇಷವಾಗಿ ಭಾರಿ ಬಹುಮತದೊಂದಿಗೆ ಆಯ್ಕೆಯಾದರೆ, ಅದರಿಂದ ಭಾರತದ ಸಂಸದೀಯ ಪ್ರಜಾಸತ್ತೆಯು ಹೂತು ಹೋಗಲಿದೆ ಹಾಗೂ ಭವಿಷ್ಯದ ನಾಯಕರಿಗೆ ಅಪಾಯಕಾರಿ ನಿದರ್ಶನವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು ಎಂದು ವಿವರಿಸಲಾಗಿದೆ.
The Indian Express ವರದಿಯ ಪ್ರಕಾರ, “ಚುನಾವಣಾ ವ್ಯವಸ್ಥೆಯಲ್ಲಿ ಅಧಿಕಾರಾರೂಢ ಪ್ರಧಾನಿಯೊಬ್ಬರು ರಾಷ್ಟ್ರಪತಿಯಾಗುವುದು ಭಾರತದಂಥ ಸಂಸದೀಯ ಪ್ರಜಾಸತ್ತೆಗೆ ಒಳಿತಲ್ಲ ಹಾಗೂ ಇದರಿಂದ ಅಪಾಯಕಾರಿ ನಿದರ್ಶನವೊಂದು ಸ್ಥಾಪಿತವಾಗಲಿದೆ. ಅಲ್ಲದೆ, ಇಂತಹ ನಡೆಯನ್ನು ಅನುಸರಿಸಿದ ಕೊನೆಯ ವ್ಯಕ್ತಿ ತಾನಾಗುತ್ತೇನೆ ಎಂದು ಅವರು ಎಚ್ಚರಿಸಿದ್ದರು” ಎಂದು ಆ ಕೃತಿಯಲ್ಲಿ ಪ್ರತಿಪಾದಿಸಲಾಗಿದೆ.
ಮಾಜಿ ಉಪ ರಾಷ್ಟ್ರಪತಿ ಹಾಗೂ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಕೂಡಾ ತಾನು ವಾಜಪೇಯಿಯವರಿಗೆ ರಾಷ್ಟ್ರಪತಿ ಅಭ್ಯರ್ಥಿಯಾಗುವಂತೆ ಸಲಹೆ ನೀಡಿದ್ದೆ ಎಂದು ಹೇಳಿದ್ದರು ಎಂದು 2004ರಲ್ಲಿ PTI ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಆದರೆ, ನಂತರ ಅವರು ಆ ಹೇಳಿಕೆಯನ್ನು ನಿರಾಕರಿಸಿದ್ದರು.