ಉತ್ತರಾಖಂಡದಲ್ಲಿ ಕನಿಷ್ಠ 170 ಮದ್ರಸಾಗಳಿಗೆ ಬೀಗ: ಐತಿಹಾಸಿಕ ಕ್ರಮ ಎಂದು ಬಣ್ಣಿಸಿದ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮುಚ್ಚುವ ಭೀತಿಯಲ್ಲಿ ಇನ್ನೂ 500 ಮದರಸಾಗಳು!

Photo credit: siasat.com
ಡೆಹ್ರಾಡೂನ್: ಮದ್ರಸಾ ಮಂಡಳಿ ಅಥವಾ ಶಿಕ್ಷಣ ಇಲಾಖೆಯಲ್ಲಿ ನೋಂದಣಿಗೊಂಡಿಲ್ಲ ಎಂಬ ಕಾರಣವನ್ನಿಟ್ಟು, ಇತ್ತೀಚೆಗೆ ಉತ್ತರಾಖಂಡ ಸರ್ಕಾರ ರಾಜ್ಯಾದ್ಯಂತ ಕನಿಷ್ಠ 170 ಮದ್ರಸಾಗಳಿಗೆ ಬೀಗ ಮುದ್ರೆ ಹಾಕಿದೆ. ಈ ಕ್ರಮವನ್ನು ಸ್ವಾಗತಿಸಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, "ಇದೊಂದು ಐತಿಹಾಸಿಕ ಕ್ರಮ" ಎಂದು ಬಣ್ಣಿಸಿದ್ದಾರೆ.
ರವಿವಾರದಂದು ಹಲ್ದ್ವಾನಿಯ ಮುಸ್ಲಿಂ ಬಾಹುಳ್ಯವಿರುವ ಬಂಭುಪುರ ಪ್ರದೇಶದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಪೊಲೀಸರನ್ನು ಒಳಗೊಂಡ ಜಂಟಿ ತಂಡವೊಂದು ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿತು. ಈ ಕಾರ್ಯಾಚರಣೆಯ ವೇಳೆ, ಮಾನ್ಯತೆ ಹೊಂದಿರುವ ನೋಂದಣಿ ಇಲ್ಲದೆ ಕಾರ್ಯಾಚರಿಸುತ್ತಿದ್ದ ಆರೋಪದ ಮೇಲೆ ಏಳು ಮದ್ರಸಾಗಳಿಗೆ ಬೀಗ ಮದ್ರೆ ಹಾಕಲಾಯಿತು.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯವರ ಕಾರ್ಯಾಲಯವು, ಈ ಕಾರ್ಯಾಚರಣೆಯನ್ನು ಸರಕಾರ ನೇಮಿಸಿದ್ದ ವಿಶೇಷ ತಂಡಗಳು ನಡೆಸಿದ್ದ ವಿಸ್ತೃತ ಸಮೀಕ್ಷೆಗಳಲ್ಲಿ ಕಂಡು ಬಂದಿರುವ ವಸ್ತುಸ್ಥಿತಿಯನ್ನು ಆಧರಿಸಿ ನಡೆಸಲಾಗಿದೆ ಎಂದು ಹೇಳಿದೆ.
ಸರಕಾರದ ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಶಿಕ್ಷಣದ ಹೆಸರಲ್ಲಿ ಮಕ್ಕಳನ್ನು ಮೂಲಭೂತವಾದದತ್ತ ಕೊಂಡೊಯ್ಯುವ ಸಂಸ್ಥೆಗಳನ್ನು ಯಾವುದೇ ಸನ್ನಿವೇಶದಲ್ಲೂ ಸಹಿಸಲು ಸಾಧ್ಯವಿಲ್ಲ ಎಂದು ಘೋಷಿಸಿದ್ದಾರೆ. ಇದರೊಂದಿಗೆ, ಇದೊಂದು ಐತಿಹಾಸಿಕ ಕ್ರಮ ಎಂದೂ ಅವರು ಬಣ್ಣಿಸಿದ್ದಾರೆ.
ಈ ನಡುವೆ, ಇದು ಕೇವಲ ಆರಂಭಿಕ ಕ್ರಮ ಎಂದು ಅಧಿಕಾರಿಗಳು ಸುಳಿವು ನೀಡಿದ್ದು, ಇನ್ನೂ ಸುಮಾರು 500 ಮದ್ರಸಾಗಳ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತಿದ್ದು, ಅವೆಲ್ಲವೂ ಬಾಗಿಲು ಮುಚ್ಚುವ ಭೀತಿ ಎದುರಿಸುತ್ತಿವೆ ಎಂದು ಹೇಳಲಾಗಿದೆ. ಸದ್ಯ ಬೀಗ ಮುದ್ರೆಗೊಳಗಾಗಿರುವ ಹಲವು ಮದ್ರಸಾಗಳು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದವು. ಹೀಗಿದ್ದೂ, ಸರಕಾರ ಕೈಗೊಂಡಿರುವ ಈ ಕ್ರಮದ ಬಗ್ಗೆ ಮುಸ್ಲಿಂ ಸಮುದಾಯದೊಳಗೆ ಕಳವಳ ವ್ಯಕ್ತವಾಗಿದೆ ಎಂದು ವರದಿಯಾಗಿದೆ.