ಸೈಫ್ ಅಲಿ ಖಾನ್ ರ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳಲು ಅವರ ಬೆನ್ನಿಗೆ ಇರಿದಿದ್ದ ದಾಳಿಕೋರ: ಪೊಲೀಸರು

ಸೈಫ್ ಅಲಿ ಖಾನ್ | PC : NDTV
ಮುಂಬೈ: ಸೈಫ್ ಅಲಿ ಖಾನ್ ಗೆ ಇರಿದ ಪ್ರಕರಣದಲ್ಲಿ ಬಂಧಿತನಾಗಿರುವ ಬಾಂಗ್ಲಾದೇಶಿ ಪ್ರಜೆಯು ಅವರ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳಲು ಅವರ ಬೆನ್ನಿಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದ ಎಂಬ ಸಂಗತಿ ವಿಚಾರಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ ಎಂದು ಮಂಗಳವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ದಾಳಿಯ ನಂತರ ಬಾಂದ್ರಾದ ಐಷಾರಾಮಿ ಪ್ರದೇಶದಲ್ಲಿರುವ ಸೈಫ್ ಅಲಿ ಖಾನ್ ಅಪಾರ್ಟ್ ಮೆಂಟ್ ನಿಂದ ನುಸುಳುಕೋರ ತಪ್ಪಿಸಿಕೊಂಡು ಪರಾರಿಯಾಗಿ, ಆ ಕಟ್ಟಡದ ಸುತ್ತಲಿನ ಉದ್ಯಾನವನದಲ್ಲಿ ಸುಮಾರು ಎರಡು ಗಂಟೆ ಕಾಲ ಬಚ್ಚಿಟ್ಟುಕೊಂಡಿದ್ದ ಎಂದು ಅವರು ಹೇಳಿದ್ದಾರೆ.
ಜನವರಿ 16ರ ಮುಂಜಾನೆ 54 ವರ್ಷದ ಬಾಲಿವುಡ್ ತಾರೆ ಸೈಫ್ ಅಲಿ ಖಾನ್ ಗೆ ಇರಿದ ನಂತರ ನೆರೆಯ ಥಾಣೆ ನಗರದಲ್ಲಿ ಅವಿತಿಟ್ಟುಕೊಂಡಿದ್ದ ಆರೋಪಿ ಶರೀಫುಲ್ ಶೆಹಝಾದ್ ಮುಹಮ್ಮದ್ ರೊಹಿಲ್ಲಾ ಅಮೀನ್ ಫಕೀರ್ (30) ಅಲಿಯಾಸ್ ವಿಜಯ್ ದಾಸ್ ಎಂಬಾತನನ್ನು ರವಿವಾರ ಪೊಲೀಸರು ಬಂಧಿಸಿದ್ದರು.
ಈ ದಾಳಿಯಲ್ಲಿ ಹಲವು ಬಾರಿ ಚಾಕುವಿನಿಂದ ಇರಿತಕ್ಕೆ ಒಳಗಾಗಿದ್ದ ಸೈಫ್ ಅಲಿ ಖಾನ್, ಲೀಲಾವತಿ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಬೆನ್ನು ಮೂಳೆಗೆ ತೂರಿದ್ದ ಹರಿತ ವಸ್ತುವೊಂದನ್ನು ವೈದ್ಯರು ಈ ಶಸ್ತ್ರಚಿಕಿತ್ಸೆಯಲ್ಲಿ ಹೊರ ತೆಗೆದಿದ್ದರು.