ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ; ವಿಶ್ವಗುರು ಎಲ್ಲಿ? : ಕಾಂಗ್ರೆಸ್ ನಾಯಕ ಗೌರವ್ ಗೊಗೋಯ್
ಗೌರವ್ ಗೊಗೋಯ್ | PC : PTI
ಹೊಸದಿಲ್ಲಿ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿದೆ ಎನ್ನಲಾದ ದಾಳಿಯನ್ನು ಕಾಂಗ್ರೆಸ್ ನಾಯಕ ಗೌರವ್ ಗೊಗೋಯ್ ಬುಧವಾರ ಖಂಡಿಸಿದ್ದಾರೆ. ಬಾಂಗ್ಲಾದೇಶದಲ್ಲಿ ನೆಲೆಸಿರುವ ಪರಿಸ್ಥಿತಿಯ ಬಗ್ಗೆ ತನ್ನ ಪಕ್ಷ ಕಳವಳಗೊಂಡಿದೆ ಎಂದು ಅವರು ಹೇಳಿದ್ದಾರೆ.
‘‘ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ನಾವು ಕಳವಳಗೊಂಡಿದ್ದೇವೆ. ಕೆಲವು ದಿನಗಳ ಹಿಂದೆ ಓರ್ವ ಇಸ್ಕಾನ್ ಸಂತರನ್ನು ಬಂಧಿಸಲಾಗಿದೆ. ಅವರ ಬೆಂಬಲಿಗರ ಮೇಲೆ ದಾಳಿ ನಡೆಸಲಾಗಿದೆ. ವಿಶ್ವಗುರು ಪ್ರಧಾನಿ ನರೇಂದ್ರ ಮೋದಿ ಎಲ್ಲಿದ್ದಾರೆ?’’ ಎಂದು ಅವರು ಪ್ರಶ್ನಿಸಿದರು.
‘‘ಪ್ರಧಾನಿ ನರೇಂದ್ರ ಮೋದಿ ಇರುವಾಗಲೂ ನೆರೆಯ ದೇಶದಲ್ಲಿ ಇಂಥ ಪರಿಸ್ಥಿತಿ ಏಕೆ ಸೃಷ್ಟಿಯಾಗಿದೆ? ಅವರು ಉಕ್ರೇನ್ ಮತ್ತು ರಶ್ಯ ಹಾಗೂ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಮಧ್ಯಸ್ಥಿಕೆ ವಹಿಸಲು ಹೋಗುತ್ತಾರೆ. ಆದರೆ, ಅವರು ಅಧಿಕಾರ ವಹಿಸಿಕೊಂಡಂದಿನಿಂದ ನೆರೆಯ ದೇಶಗಳ ಮೇಲಿನ ಭಾರತದ ಪ್ರಭಾವ ಕುಸಿಯುತ್ತಿದೆ. ಅವರು ಈಗ ಮೌನವಾಗಿದ್ದಾರೆ. ಪರಿಸ್ಥಿತಿಯನ್ನು ಇತ್ಯರ್ಥಪಡಿಸಲು ಯಾವುದೇ ಸದೃಢ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ’’ ಎಂದು ಕಾಂಗ್ರೆಸ್ ನಾಯಕ ಅಭಿಪ್ರಾಯಪಟ್ಟರು.
► ಬಿಜೆಪಿ ಖಂಡನೆ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿದೆ ಎನ್ನಲಾದ ದಾಳಿಗಳು ಆ ದೇಶದ ಮಧ್ಯಂತರ ಸರಕಾರವು ‘‘ಮೂಲಭೂತವಾದಿಗಳ ಮುಷ್ಟಿಯಲ್ಲಿ ಇದೆ’’ ಎನ್ನುವುದನ್ನು ಎತ್ತಿ ತೋರಿಸಿವೆ ಎಂದು ಕೇಂದ್ರ ಸಚಿವ ಗಿರಿರಾಜ್ ಕಿಶೋರ್ ಬುಧವಾರ ಹೇಳಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ವಿಶ್ವಸಂಸ್ಥೆಯು ಮಧ್ಯಪ್ರವೇಶಿಸಬೇಕು ಎಂದು ಅವರು ಒತ್ತಾಯಿಸಿದರು.
ಬಾಂಗ್ಲಾದೇಶದಲ್ಲಿ ಇಸ್ಕಾನ್ ಗುಂಪಿನ ನಾಯಕರೊಬ್ಬರ ಬಂಧನವನ್ನು ಖಂಡಿಸಿದ ಅವರು, ಇಂಥ ದಾಳಿಗಳು ಮಾನವೀಯತೆಗೆ ವಿರುದ್ಧವಾಗಿವೆ ಎಂದರು.