ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನಡೆಸುವ ಪ್ರಧಾನಿ ಮೋದಿಯವರ ಪ್ರಯತ್ನ ಅವರಿಗೆ ತುಂಬ ದುಬಾರಿಯಾಗಲಿದೆ: ಮಣಿಶಂಕರ್ ಅಯ್ಯರ್
ಮಣಿಶಂಕರ್ ಅಯ್ಯರ್ (Photo: PTI)
ಕೋಝಿಕ್ಕೋಡ್: ಅಯೋಧ್ಯೆ ಸಮಾರಂಭದಲ್ಲಿ ಭಾಗವಹಿಸಲು ನಿರಾಕರಿಸಿರುವ ನಾಲ್ವರು ಶಂಕರಾಚಾರ್ಯರ ಅಸಮ್ಮತಿಯ ಹಿನ್ನೆಲೆಯಲ್ಲಿ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಖುದ್ದಾಗಿ ನೆರವೇರಿಸುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನವು ಅವರಿಗೆ ತುಂಬ ದುಬಾರಿಯಾಗಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.
ಶುಕ್ರವಾರ ಇಲ್ಲಿ ನಡೆಯುತ್ತಿರುವ ಏಳನೇ ಕೇರಳ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಅವರು,ಇದು ಹಿಂದು ಧರ್ಮ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸ ತಿಳಿದಿರುವ ನಿಜವಾದ ಹಿಂದು ಯಾರು ಎನ್ನುವುದನ್ನು ತೋರಿಸುವುದರ ಆರಂಭವಾಗಿದೆ. ಖುದ್ದಾಗಿ ಹಾಜರಿದ್ದು ಧಾರ್ಮಿಕ ಸಮಾರಂಭವನ್ನು ಖುದ್ದು ನಡೆಸುವ ಮೋದಿಯವರ ಪ್ರಯತ್ನಕ್ಕೆ ಹಿಂದು ಧರ್ಮದ ನಾಲ್ವರು ಅತ್ಯುನ್ನತ ಸಂತರು ಬಲವಾದ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ. ಇದು ಮೋದಿಯವರಿಗೆ ತಿರುಗುಬಾಣವಾಗಲಿದೆ,ಅವರ ಕೈ ಕಚ್ಚಲಿದೆ ಎಂದು ಹೇಳಿದರು.
ರಾಮ ಮಂದಿರ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಪ್ರಾಣ ಪ್ರತಿಷ್ಠೆಯನ್ನು ನಡೆಸುವುದು ಧರ್ಮಶಾಸ್ತ್ರಗಳಿಗೆ ವಿರುದ್ಧವಾಗಿದೆ. ಹೀಗಾಗಿ ನಾಲ್ವರು ಶಂಕರಾಚಾರ್ಯರ ಪೈಕಿ ಯಾರೂ ಅಯೋಧ್ಯೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಉತ್ತರಾಖಂಡದ ಜ್ಯೋತಿರ್ ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಈಗಾಗಲೇ ತಿಳಿಸಿದ್ದಾರೆ. ಹಿಂದು ಧರ್ಮವು ಭಾರತದಲ್ಲಿ ಬಹುಪಾಲು ಜನರು ಆಚರಿಸುತ್ತಿರುವ ಅತ್ಯಂತ ಪ್ರಾಚೀನ ಧರ್ಮವಾಗಿದ್ದರೆ ಹಿಂದುತ್ವವು ಹಿಂದು ಬಹುಸಂಖ್ಯಾತ ವಾದದೊಂದಿಗೆ ವ್ಯವಹರಿಸುತ್ತಿರುವ ರಾಜಕೀಯ ತತ್ವಜ್ಞಾನವಾಗಿದೆ ಎಂದು ಹೇಳಿದ ಅಯ್ಯರ್, ‘ಹೆಚ್ಚಿನ ಹಿಂದುಗಳು,ಅವರಲ್ಲಿ ಕನಿಷ್ಠ ಶೇ.50ರಷ್ಟು ಜನರು ಹಿಂದುತ್ವಕ್ಕೆ ಎಂದೂ ಮತ ನೀಡಿಲ್ಲ. ಚುನಾವಣೆಗಳನ್ನು ನಡೆಸುವ ನಮ್ಮ ರೀತಿಯು ಕಳೆದ ಹತ್ತು ವರ್ಷಗಳಲ್ಲಿ ಹಿಂದುತ್ವ ಶಕ್ತಿಗೆ ಕಾರಣವಾಗಿದೆ’ ಎಂದರು.
ಬೊಫೋರ್ಸ್ ಹಗರಣ
ತನ್ನ ಇತ್ತೀಚಿನ ‘ನಾನು ತಿಳಿದಿರುವ ರಾಜೀವ್ ಮತ್ತು ಅವರು ಭಾರತದ ಅತ್ಯಂತ ತಪ್ಪಾಗಿ ಗ್ರಹಿಸಲ್ಪಟ್ಟ ಪ್ರಧಾನಿಯಾಗಿದ್ದರು ಏಕೆ?’ ಕೃತಿಯ ಕುರಿತು ಚರ್ಚಿಸಿದ ಅಯ್ಯರ್,ಬೊಫೋರ್ಸ್ ಹಗರಣ ಸೇರಿದಂತೆ ಮಾಜಿ ಪ್ರಧಾನಿಯ ವಿರುದ್ಧ ಮಾಡಲಾಗಿದ್ದ ಪ್ರತಿಯೊಂದೂ ಆರೋಪವು ಸುಳ್ಳಿನ ಬುನಾದಿಯ ಮೇಲೆ ನಿಂತಿತ್ತು ಎಂದು ಅವರು ಹೇಳಿದರು.
1989ರ ಲೋಕಸಭಾ ಚುನಾವಣೆಗಳಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರದ ಪತನಕ್ಕೆ ಕಾರಣವಾಗಿದ್ದ ಭ್ರಷ್ಟಾಚಾರ ಹಗರಣವು 1986ರಲ್ಲಿ ಸ್ವೀಡನ್ನ ಶಸ್ತ್ರಾಸ್ತ್ರ ತಯಾರಿಕೆ ಕಂಪನಿ ಬೊಫೋರ್ಸ್ ಜೊತೆ ಮಾಡಿಕೊಳ್ಳಲಾಗಿದ್ದ 1,437 ಕೋಟಿ ರೂ.ಗಳ ವೆಚ್ಚದಲ್ಲಿ ಹೋವಿಟ್ಝರ್ ಫಿರಂಗಿಗಳ ಖರೀದಿ ಒಪ್ಪಂದದಲ್ಲಿ ಕಮಿಷನ್ ಆರೋಪಕ್ಕೆ ಸಂಬಂಧಿಸಿದೆ.
ಡೂನ ಸ್ಕೂಲ್ ಮತ್ತು ಕ್ಯಾಂಬ್ರಿಡ್ಜ್ನಲ್ಲಿ ರಾಜೀವ್ಗಿಂತ ಹಿರಿಯ ವಿದ್ಯಾರ್ಥಿಯಾಗಿದ್ದು ಪ್ರಧಾನಿ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದ ಅಯ್ಯರ್, ಬೊಫೋರ್ಸ್ ಹಗರಣದ ಕಥನಕ್ಕೆ ಮಾಧ್ಯಮಗಳನ್ನು ದೂಷಿಸಿದರು. ಅದು ಆರಂಭದಿಂದ ಅಂತ್ಯದವರೆಗೂ ಸಂಪೂರ್ಣ ಸುಳ್ಳು ಆಗಿತ್ತು ಮತ್ತು ರಾಜೀವ್ ವಿರುದ್ಧ ಎಳ್ಳಷ್ಟೂ ಸಾಕ್ಷ್ಯಾಧಾರಗಳಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಕೂಡ ಹೇಳಿತ್ತು ಎಂದು ಪ್ರತಿಪಾದಿಸಿದರು.
‘ಬೊಫೋರ್ಸ್ ವ್ಯವಹಾರಗಳ ಕುರಿತು ತನಿಖೆಯ ನೇತೃತ್ವ ವಹಿಸಿದ್ದ ಸ್ವೀಡನ್ ಪೋಲಿಸ್ನ ಮಾಜಿ ಮುಖ್ಯಸ್ಥರು 2015ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಬೊಫೋರ್ಸ್ ಹಗರಣದಲ್ಲಿ ರಾಜೀವ್ ಗಾಂಧಿಯವರು ಯಾವುದೇ ಹಣವನ್ನು ಪಡೆದಿದ್ದರು ಎಂದು ತೋರಿಸುವ ಯಾವುದೇ ಸಾಕ್ಷ್ಯವು ತಮ್ಮ ಬಳಿಯಲ್ಲಿರಲಿಲ್ಲ ಎಂದು ಒಪ್ಪಿಕೊಂಡಿದ್ದರು. ಆದಾಗ್ಯೂ ಈ ಕಪೋಲಕಲ್ಪಿತ ಹಗರಣವು ಭಾರತಕ್ಕಾಗಿ ಉನ್ನತ ದೃಷ್ಟಿಕೋನವನ್ನು ಹೊಂದಿದ್ದ ವ್ಯಕ್ತಿಯ ರಾಜಕೀಯ ವೃತ್ತಿಜೀವನವನ್ನು ನಾಶಗೊಳಿಸಿತ್ತು. ಇದೇ ಕಾರಣದಿಂದ ಇಂದು ನಾನು ಮಾಧ್ಯಮಗಳ ಬಗ್ಗೆ ಸಿಟ್ಟಾಗಿದ್ದೇನೆ’ ಎಂದು ಅಯ್ಯರ್ ಹೇಳಿದರು.
ಗುರುವಾರ ಆರಂಭಗೊಂಡ ನಾಲ್ಕು ದಿನಗಳ ಕೇರಳ ಸಾಹಿತ್ಯೋತ್ಸವದಲ್ಲಿ ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್,ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಷ ಸತ್ಯಾರ್ಥಿ,ನಟ ಪ್ರಕಾಶ ರಾಜ್,ಅಮೆರಿಕದ ವೈದ್ಯ-ಲೇಖಕ ಅಬ್ರಹಾಂ ವರ್ಗೀಸ್, ಪ್ರಶಸ್ತಿ ವಿಜೇತ ಲೇಖಕ ಪೆರುಮಾಳ ಮುರುಗನ್ ಮತ್ತು ಕಾಮಿಡಿಯನ್ ಕಾನನ್ ಗಿಲ್ ಸೇರಿದಂತೆ 400ಕ್ಕೂ ಅಧಿಕ ಗಣ್ಯರು ಭಾಗವಹಿಸಿದ್ದಾರೆ.