ಎನ್ಡಿಎ ಮತ್ತೆ ಅಧಿಕಾರಕ್ಕೆ ಬಂದಾಗ ಕೊಲೀಜಿಯಂ ವ್ಯವಸ್ಥೆ ಕೈಬಿಡಲು ಯತ್ನ: ಬಿಜೆಪಿಯ ಮಿತ್ರ ಪಕ್ಷ ಆರ್ಎಲ್ಎಂ ಮುಖ್ಯಸ್ಥ ಉಪೇಂದ್ರ ಕುಶ್ವಾಹ
ಉಪೇಂದ್ರ ಕುಶ್ವಾಹ | NDTV
ಹೊಸದಿಲ್ಲಿ: ಬಿಜೆಪಿ ನೇತೃತ್ವದ ಎನ್ಡಿಎ ಮತ್ತೆ ಅಧಿಕಾರಕ್ಕೆ ಬಂದಾಗ ನ್ಯಾಯಾಧೀಶರುಗಳ ನೇಮಕಾತಿಗಾಗಿ ಇರುವ “ಪ್ರಜಾಪ್ರಭುತ್ವ ವಿರೋಧಿ” ಆಗಿರುವ ಕೊಲೀಜಿಯಂ ವ್ಯವಸ್ಥೆಯನ್ನು ಕೈಬಿಡಲು ಮತ್ತೊಮ್ಮೆ ಪ್ರಯತ್ನಿಸಲಾಗುವುದು ಎಂದು ಬಿಜೆಪಿಯ ಮಿತ್ರ ಪಕ್ಷ, ಎನ್ಡಿಎ ಭಾಗವಾಗಿರುವ ರಾಷ್ಟ್ರೀಯ ಲೋಕ ಮೋರ್ಚಾ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಹೇಳಿದ್ದಾರೆ.
“ಕೊಲೀಜಿಯಂ ವ್ಯವಸ್ಥೆ ಹಲವಾರು ಲೋಪದೋಷಗಳನ್ನು ಹೊಂದಿದೆ. ಅದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಅದು ದಲಿತರು, ಒಬಿಸಿಗಳು ಮತ್ತು ಮೇಲ್ಜಾತಿಗಳ ಬಡವರಿಗೆ ಉನ್ನತ ನ್ಯಾಯಾಂಗದಲ್ಲಿ ನ್ಯಾಯಾಧೀಶರಾಗುವ ಅವಕಾಶಗಳ ಬಾಗಿಲನ್ನು ಮುಚ್ಚಿದೆ,” ಎಂದು ಅವರು ಹೇಳಿದ್ದಾರೆ.
“ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳಲ್ಲಿರುವ ನ್ಯಾಯಪೀಠಗಳನ್ನು ಗಮನಿಸಿದರೆ, ಕೆಲ ನೂರು ಕುಟುಂಬಗಳ ಸದಸ್ಯರೇ ಅಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಈಗಿನ ರಾಷ್ಟ್ರಪತಿ ಮತ್ತು ಅವರಿಗಿಂತ ಮುಂಚೆ ಆ ಹುದ್ದೆಯಲ್ಲಿದ್ದವರು ಈ ವ್ಯವಸ್ಥೆಯನ್ನು ಟೀಕಿಸಿದ್ದರು,” ಎಂದು ಕುಶ್ವಾಹ ಹೇಳಿದ್ದಾರೆ.