ಮಸೂದೆ ಮೂಲಕ ಡಿಜಿಟಲ್, ಸಾಮಾಜಿಕ ಮಾಧ್ಯಮಗಳನ್ನು ಮೌನವಾಗಿಸುವ ಪ್ರಯತ್ನ : ಪ್ರಿಯಾಂಕಾ ಗಾಂಧಿ ತರಾಟೆ
ಪ್ರಿಯಾಂಕಾ ಗಾಂಧಿ | PC : PTI
ಹೊಸದಿಲ್ಲಿ : ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆ ತರುವ ಮೂಲಕ ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ, ಒಟಿಟಿ ವೇದಿಕೆ ಹಾಗೂ ಖಾಸಗಿ ಸಾಮರ್ಥ್ಯದಲ್ಲಿ ಬರೆಯವ, ಮಾತನಾಡುವವರನ್ನು ಬಾಯಿ ಮುಚ್ಚಿಸಲು ಮೋದಿ ಸರಕಾರ ಸಿದ್ಧತೆ ನಡೆಸುತ್ತಿದೆ. ಈ ಕ್ರಮವನ್ನು ದೇಶ ಸಹಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಆರೋಪಿಸಿದ್ದಾರೆ.
ವಾಕ್ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿರುವ ಮಹಾತ್ಮಾ ಗಾಂಧಿ (ಯಂಗ್ ಇಂಡಿಯಾ, 1922) ಹಾಗೂ ಜವಾಹರ್ಲಾಲ್ ನೆಹರೂ (ಮಾರ್ಚ್, 1940) ಅವರ ಎರಡು ಹೇಳಿಕೆಗಳನ್ನು ಪ್ರಿಯಾಂಕಾ ಗಾಂಧಿ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
‘‘ಈ ಎರಡು ಹೇಳಿಕೆಗಳು ನಮ್ಮ ಪ್ರಜೆಗಳು ವಾಕ್ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ಪಡೆಯುತ್ತಿಲ್ಲ ಎಂಬುದನ್ನು ತೋರಿಸಿದೆ. ವಾಕ್ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ಹಲವು ವರ್ಷಗಳಿಂದ ಹೋರಾಡಿದ್ದಾರೆ’’ ಎಂದು ಅವರು ಹೇಳಿದರು.
ನಾಗರಿಕ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯ ನಮ್ಮ ಹುತಾತ್ಮರ ಹಾಗೂ ಸ್ವಾತಂತ್ರ್ಯ ಹೋರಾಟಗಾರರು ನೀಡಿದ ಮೌಲ್ಯಯುತ ಕೊಡುಗೆ. ಸ್ವಾತಂತ್ರೋತ್ತರ ಭಾರತದ ಚರಿತ್ರೆಯಲ್ಲಿ ಯಾವುದೇ ಸರಕಾರ ಪ್ರಜೆಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಬಗ್ಗೆ ಎಂದೂ ಚಿಂತಿಸಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಇಂದು, ಒಂದೆಡೆ ಅಧಿಕಾರವನ್ನು ಬಳಸಿ ಸಂಪೂರ್ಣ ಮಾಧ್ಯಮವನ್ನು ಸರಕಾರದ ಮುಖವಾಣಿಯನ್ನಾಗಿ ಬದಲಾಯಿಸಲಾಗಿದೆ. ಇನ್ನೊಂದೆಡೆ ಬಿಜೆಪಿ ಸರಕಾರ ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ, ಒಟಿಟಿ ವೇದಿಕೆ ಹಾಗೂ ಖಾಸಗಿ ಸಾಮರ್ಥ್ಯದಲ್ಲಿ ಬರೆಯುವ, ಮಾತನಾಡುವವರ ಬಾಯಿ ಮುಚ್ಚಿಸಲು ಪ್ರಸಾರ ಕಾಯ್ದೆ ತರಲು ಸಿದ್ಧತೆ ನಡೆಸುತ್ತಿದೆ ಎಂದು ಅವರು ಹೇಳಿದರು.
ಇದು ಸ್ವೀಕಾರಾರ್ಹವಲ್ಲ. ಇಂತಹ ಕ್ರಮಗಳನ್ನು ಈ ದೇಶ ಸಹಿಸಲಾರದು ಎಂದು ಪ್ರಿಯಾಂಕಾ ಗಾಂಧಿ ಪ್ರತಿಪಾದಿಸಿದ್ದಾರೆ.