ಬಾಂಗ್ಲಾದೇಶದ ಸಾವಿರಾರು ಪ್ರಜೆಗಳಿಂದ ಭಾರತದ ಗಡಿ ದಾಟಲು ಯತ್ನ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಬಾಂಗ್ಲಾದೇಶದ ಸಾವಿರಾರು ಪ್ರಜೆಗಳು ಭಾರತದ ಗಡಿ ದಾಟಲು ಹಾಗೂ ಆಶ್ರಯ ಕೋರಲು ಪಶ್ಚಿಮಬಂಗಾಳದ ಕೋಚ್ಬೆಹಾರ್ ಜಿಲ್ಲೆಯ ಸೀತಾಲ್ಕುಚ್ಚಿಯ ಬೇಲಿಯಿಂದ ಸುತ್ತುವರಿದ ಭೂಗಡಿ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಸೇರಿದ್ದುದರಿಂದ ಉದ್ವಿಗ್ನತೆ ಸೃಷ್ಟಿಯಾಯಿತು.
ಬಾಂಗ್ಲಾದೇಶದ ಲಾಲ್ಮೋಹನಿರ್ಹಾಟ್ ಜಿಲ್ಲೆಯ ಗೆಂದುಗುರಿ ಹಾಗೂ ದೊಯಿಖಾವಾ ಗ್ರಾಮದಲ್ಲಿರುವ ಗಡಿ ಬೇಲಿಯಿಂದ 400 ಮೀಟರ್ ದೂರದಲ್ಲಿ ಹಿಂದೂಗಳೇ ಹೆಚ್ಚಿದ್ದ ಬಾಂಗ್ಲಾದೇಶದ ಪ್ರಜೆಗಳು ಸೇರಿದ್ದರು.
ಆದರೆ, ಗಡಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಅವರ ಪ್ರಯತ್ನವನ್ನು ವಿಫಲಗೊಳಿಸಿತು.
ಈ ಪ್ರದೇಶದ ಕುರಿತು ನಿಗಾ ಇರಿಸಲು ಪಂಥಂಟುಲ್ಲಿ ಗ್ರಾಮದಲ್ಲಿ ಗಡಿ ಭದ್ರತಾ ಪಡೆಯ 157 ಬೆಟಾಲಿಯನ್ನ ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಇದರಿಂದ ವಿದೇಶಿಯರು ಒಳ ಪ್ರವೇಶಿಸುವುದು ಅಸಾಧ್ಯವಾಗಿತ್ತು. ಹತಾಶೆಯಾದ ಬಾಂಗ್ಲಾದೇಶಿ ಪ್ರಜೆಗಳು ಭಾರತ ಪ್ರವೇಶಿಸುವ ತಮ್ಮ ಬೇಡಿಕೆಗೆ ಬೆಂಬಲವಾಗಿ ಘೋಷಣೆಗಳನ್ನು ಕೂಗಿದರು.
ಈ ಘಟನೆಯನ್ನು ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ದೊಡ್ಡ ಸಂಖ್ಯೆಯ ಬಾಂಗ್ಲಾದೇಶಿ ಪ್ರಜೆಗಳು ಗಡಿಯಲ್ಲಿ ಸೇರಿದ್ದರು. ಆದರೆ, ಅನಂತರ ಅವರನ್ನು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ ಕರೆಸಿಕೊಂಡಿತು ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಗಡಿ ಭದ್ರತಾ ಪಡೆಯ ಗುವಾಹಟಿ ಫ್ರಂಟಿಯರ್, ಈ ಬೆಳವಣಿಗೆಯನ್ನು ಹೊಸ ಗಡಿ ಸವಾಲು ಎಂದು ಕರೆದಿದೆ.