ಮೊಮ್ಮಗನ ಸುಪರ್ದಿ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅತುಲ್ ಸುಭಾಶ್ ರ ತಾಯಿ
ಅತುಲ್ ಸುಭಾಶ್ | PC : PTI
ಹೊಸದಿಲ್ಲಿ : ಪತ್ನಿಯ ಕಿರುಕುಳದಿಂದ ಬೇಸತ್ತು ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಅತುಲ್ ಸುಭಾಶ್ ಆತ್ಮಹತ್ಯೆ ಮಾಡಿಕೊಂಡ ಹನ್ನೊಂದು ದಿನಗಳ ಬಳಿಕ, ಶುಕ್ರವಾರ ಅವರ ತಾಯಿ ಅಂಜು ದೇವಿ ಸುಪ್ರೀಂ ಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ನನ್ನ ಮೊಮ್ಮಗನನ್ನು ತಕ್ಷಣ ಪತ್ತೆಹಚ್ಚಿ ನನ್ನ ಸುಪರ್ದಿಗೆ ವಹಿಸಿಕೊಡಬೇಕು ಎಂಬುದಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಅವರು ತನ್ನ ಅರ್ಜಿಯಲ್ಲಿ ಕೋರಿದ್ದಾರೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎನ್. ಕೋಟೀಶ್ವರ್ ಸಿಂಗ್ರನ್ನು ಒಳಗೊಂಡ ಇಬ್ಬರು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠವೊಂದು ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡು ಉತ್ತರಪ್ರದೇಶ, ಹರ್ಯಾಣ ಮತ್ತು ಕರ್ನಾಟಕ ರಾಜ್ಯ ಸರಕಾರಗಳಿಗೆ ನೋಟಿಸ್ಗಳನ್ನು ಜಾರಿಗೊಳಿಸಿತು. ಬಳಿಕ, ಅರ್ಜಿಯ ಮುಂದಿನ ವಿಚಾರಣೆಯನ್ನು ಜನವರಿ 7ಕ್ಕೆ ನಿಗದಿಪಡಿಸಿತು.
ನನ್ನ ನಾಲ್ಕು ವರ್ಷದ ಮೊಮ್ಮಗನನ್ನು ಅಜ್ಞಾತ ಸ್ಥಳವೊಂದರಲ್ಲಿ ಮತ್ತು ಅಜ್ಞಾತ ವ್ಯಕ್ತಿಯೊಬ್ಬರ ಸುಪರ್ದಿಯಲ್ಲಿ ಅಕ್ರಮ ಬಂಧನದಲ್ಲಿ ಇರಿಸಲಾಗಿದೆ ಎನ್ನುವುದನ್ನು ತಿಳಿದು ನನಗೆ ತೀರಾ ಆಘಾತವಾಗಿದ್ದು, ಸುಪ್ರೀಂ ಕೋರ್ಟ್ನ ಕದ ತಟ್ಟುವುದು ಅನಿವಾರ್ಯವಾಯಿತು ಎಂದು ಅಂಜು ದೇವಿ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.
‘‘ಪ್ರತಿವಾದಿ ಪೊಲೀಸ್ ಅಧಿಕಾರಿಗಳು ಮಗುವನ್ನು ಹುಡುಕಿ ಈ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಹಾಗೂ ಹಾಜರುಪಡಿಸಿದ ಬಳಿಕ ಮಗುವಿನ ಸುಪರ್ದಿಯನ್ನು ಅಜ್ಜಿಯೂ ಆಗಿರುವ ಅರ್ಜಿದಾರರಿಗೆ (ಅಂಜು ದೇವಿ) ವಹಿಸುವಂತೆ ನಿರ್ದೇಶನ ನೀಡಬೇಕು ಎಂದು ನಾನು ಕೋರುತ್ತೇನೆ’’ ಎಂದು ತನ್ನ ಅರ್ಜಿಯಲ್ಲಿ ಅವರು ಕೋರಿದ್ದಾರೆ.
‘‘ಹಾಲಿ ಪ್ರಕರಣದಲ್ಲಿ, ಮಗುವಿನ ತಂದೆ ನಿಧನರಾಗಿದ್ದಾರೆ ಮತ್ತು ತಾಯಿ ಜೈಲಿನಲ್ಲಿದ್ದಾರೆ. ನನ್ನ ಮೊಮ್ಮಗ ಎಲ್ಲಿದ್ದಾನೆ ಮತ್ತು ಯಾರ ಸುಪರ್ದಿಯಲ್ಲಿ ಇದ್ದಾನೆ ಎನ್ನುವುದು ತಿಳಿದಿಲ್ಲ. ಹಾಗಾಗಿ, ಮಗುವಿನ ಕಸ್ಟಡಿಯು ಕಾನೂನುಬಾಹಿರ ಹಾಗೂ ಅದು ಅಕ್ರಮ ಬಂಧನಕ್ಕೆ ಸಮವಾಗಿದೆ ಎಂಬುದಾಗಿ ನ್ಯಾಯಾಲಯವು ಪರಿಗಣಿಸಬೇಕು’’ ಎಂದು ಅರ್ಜಿದಾರರು ಹೇಳಿದ್ದಾರೆ.
ಮಗುವಿನ ಅಜ್ಜಿಯಾಗಿರುವ ನಾನು ಈಗ ಅದರ ಯೋಗಕ್ಷೇಮವನ್ನು ನೋಡಿಕೊಳ್ಳಲು ಸರಿಯಾದ ವ್ಯಕ್ತಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ.