ವೀಸಾ ಸಮಸ್ಯೆಗಳಿಂದ ಭಾರತ ತೊರೆದ ಆಸ್ಟ್ರೇಲಿಯನ್ ಪತ್ರಕರ್ತೆ
ಸಿಖ್ ಪ್ರತ್ಯೇಕತಾವಾದಿ ಕುರಿತ ವರದಿ ಗೆರೆಯನ್ನು ದಾಟಿದೆ ಎಂದು ಹೇಳಲಾಯಿತು: ಪತ್ರಕರ್ತೆ ಆರೋಪ
ಅವನಿ ಡಯಾಸ್ | PC : Instagram
ಹೊಸದಿಲ್ಲಿ: ಸಿಖ್ ಪ್ರತ್ಯೇಕತಾವಾದಿಯ ಹತ್ಯೆಗೆ ಸಂಬಂಧಿಸಿದ ವರದಿಗಾರಿಕೆಯ ಕಾರಣ ವೀಸಾ ಅವಧಿ ವಿಸ್ತರಿಸಲು ಸಾಧ್ಯವಿಲ್ಲ ಎಂದು ಸಂಬಂಧಿತ ಪ್ರಾಧಿಕಾರಗಳು ಹೇಳಿದ ಕೆಲವೇ ವಾರಗಳಲ್ಲಿ ಆಸ್ಟ್ರೇಲಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ನ ದಕ್ಷಿಣ ಏಷ್ಯಾ ಬ್ಯುರೋ ಮುಖ್ಯಸ್ಥೆ ಅವನಿ ಡಯಾಸ್ ಭಾರತ ತೊರೆದಿದ್ದಾರೆ.
ಆಸ್ಟ್ರೇಲಿಯಾದ ಪ್ರಾಧಿಕಾರಗಳ ಒತ್ತಡದ ನಂತರ ಅವನಿ ಅವರ ವೀಸಾವನ್ನು ಎರಡು ತಿಂಗಳ ಕಾಲ ವಿಸ್ತರಿಸಲಾಯಿತಾದರೂ ಈ ಬೆಳವಣಿಗೆ ನಡೆಯುವ ಮುಂಚಿನ ದಿನವೇ ಆಕೆ ಭಾರತ ತೊರೆದಿದ್ದರು.
“ಭಾರತದ ಸಚಿವಾಲಯದ ಸೂಚನೆಯ ಕಾರಣ ಆಕೆಯ ಮಾನ್ಯತೆ ನೀಡಲು ಸಾಧ್ಯವಿಲ್ಲ” ಎಂದು ಆಕೆಗೆ ತಿಳಿಸಿದ ನಂತರ ಅವನಿ ಎಪ್ರಿಲ್ 19ರಂದು ಭಾರತ ತೊರೆದಿದ್ದರು.
ಈ ಕುರಿತು ಅವನಿ ಡಯಾಸ್ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ. “ಕಳೆದ ವಾರ ನಾನು ದಿಢೀರ್ ಎಂದು ಭಾರತ ತೊರೆಯಬೇಕಾಯಿತು. ನನ್ನ ವರದಿಗಾರಿಕೆ ಗೆರೆಯನ್ನು ದಾಟಿದ ಕಾರಣ ನನ್ನ ವೀಸಾ ವಿಸ್ತರಣೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ಮೋದಿ ಸರ್ಕಾರ ನನಗೆ ತಿಳಿಸಿದೆ,” ಎಂದು ಅವರು ಬರೆದಿದ್ದಾರೆ.
ತಮ್ಮ ಪಾಡ್ಕಾಸ್ಟ್ ಸರಣಿ “ಲುಕಿಂಗ್ ಫಾರ್ ಮೋದಿ”ಯಲ್ಲಿ ಸೋಮವಾರ ಡಯಾಸ್ ತಾವು ಭಾರತದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದುದಾಗಿ ತಿಳಿಸಿದ್ದಾರೆ.
ತಮ್ಮ ವಾರ್ಷಿಕ ವೀಸಾ ನವೀಕರಣಕ್ಕಾಗಿ ಆಕೆ ಮಾರ್ಚ್ ತಿಂಗಳಿನಲ್ಲಿ ಕಾಯುತ್ತಿದ್ಧಾಗ ಕೇಂದ್ರ ವಿದೇಶಾಂಗ ಸಚಿವಾಲಯದಿಂದ ಕರೆ ಬಂದು, ವೀಸಾ ಅವಧಿ ವಿಸ್ತರಣೆ ಸಾಧ್ಯವಿಲ್ಲ, ವೀಸಾ ಅವಧಿ ಮೀರುವ ಮುನ್ನ ದೇಶ ತೊರೆಯುವಂತೆ ಸೂಚಿಸಲಾಗಿತ್ತು.
ಅದು ನನ್ನ ಸಿಖ್ ಪ್ರತ್ಯೇಕತಾವಾದಿ ಕುರಿತ ವರದಿಗಾಗಿ ಎಂದು ಹೇಳಲಾಯಿತು, ಅದು ತೀರಾ ಹೆಚ್ಚಾಯಿತು ಎಂದು ಹೇಳಲಾಯಿತು,” ಎಂದು ಆಕೆ ತಿಳಿಸಿದ್ದಾರೆ.
ವಿದೇಶಾಂಗ ಸಚಿವಾಲಯದ ಆದೇಶದ ಕಾರಣ ಲೋಕಸಭಾ ಚುನಾವಣೆಯ ವರದಿಗಾರಿಕೆಗೆ ಆಕೆಗೆ ಅನುಮತಿಸುವ ಸಾಧ್ಯತೆಯಿಲ್ಲ ಎಂದು ಆಸ್ಟ್ರೇಲಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ಗೆ ಎಪ್ರಿಲ್ 16ರಂದು ಪ್ರೆಸ್ ಇನ್ಫಾರ್ಮೇಶನ್ ಬ್ಯುರೋ ತಿಳಿಸಿತ್ತು.
“ಭಾರತದಲ್ಲಿ ನನ್ನ ಕೆಲಸ ಮಾಡುವುದು ತೀರಾ ಕಷ್ಟಕರ,” ಎಂದೂ ಅವನಿ ಡಯಾಸ್ ತಮ್ಮ ಪಾಡ್ಕಾಸ್ಟ್ನಲ್ಲಿ ತಿಳಿಸಿದ್ದಾರೆ.