ಆಸ್ಟ್ರೇಲಿಯನ್ ಓಪನ್: ಸುಮಿತ್ ನಾಗಲ್ ಗೆಲುವಿನ ಓಟಕ್ಕೆ ಕಡಿವಾಣ
ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಗೆ ಗೆಲುವು
ಸುಮಿತ್ ನಾಗಲ್ | Photo: PTI
ಮೆಲ್ಬರ್ನ್: ಚೀನಾದ ಟೆನಿಸ್ ಆಟಗಾರ ಜುನ್ಚೆಂಗ್ ಶಾಂಗ್ ವರ್ಷದ ಮೊದಲ ಗ್ರ್ಯಾನ್ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್ನಲ್ಲಿ ಸುಮಿತ್ ನಾಗಲ್ ರ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದ್ದಾರೆ.
ಗುರುವಾರ ಎರಡು ಗಂಟೆ, 50 ನಿಮಿಷಗಳ ಕಾಲ ನಡೆದ 2ನೇ ಸುತ್ತಿನ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ನಾಗಲ್ ಉತ್ತಮ ಆರಂಭ ಪಡೆದಿದ್ದರೂ ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ 18ರ ಹರೆಯದ ಶಾಂಗ್ ವಿರುದ್ಧ ಸೋತಿದ್ದಾರೆ. ಶಾಂಗ್ 2-6, 6-3, 7-5, 6-4 ಸೆಟ್ ಗಳ ಅಂತರದಿಂದ ಜಯ ಸಾಧಿಸಿದರು.
26ರ ವಯಸ್ಸಿನ ಹರ್ಯಾಣದ ಆಟಗಾರ ನಾಗಲ್ 2ನೇ ಸುತ್ತಿನಲ್ಲೂ ಸೋತಿದ್ದರೂ 180,0000 ಆಸ್ಟ್ರೇಲಿಯನ್ ಡಾಲರ್ ಬಹುಮಾನವನ್ನು ಮನೆಗೊಯ್ಯಲಿದ್ದಾರೆ.
ಶಾಂಗ್ ಪ್ರಯತ್ನದ ಹೊರತಾಗಿಯೂ ತನ್ನ ಮುನ್ನಡೆ ಕಾಯ್ದುಕೊಂಡ ನಾಗಲ್ ಮೊದಲ ಸೆಟನ್ನು 6-2 ಅಂತರದಿಂದ ಗೆದ್ದುಕೊಂಡರು. 2ನೇ ಸೆಟ್ನಲ್ಲಿ ಶಾಂಗ್ ಆಕ್ರಮಣಕಾರಿಯಾಗಿ ಆಡಿದ್ದು, ಹೆಚ್ಚು ತಪ್ಪೆಸಗದೇ 6-3 ಅಂತರದಿಂದ ಜಯ ಸಾಧಿಸಿದರು. 3ನೇ ಸೆಟ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಆದರೆ ನಾಗಲ್ ಅವರ ಸತತ ತಪ್ಪಿನ ಲಾಭ ಪಡೆದ ಶಾಂಗ್ ಮರು ಹೋರಾಟ ನೀಡಿದರು. 3ನೇ ಸೆಟನ್ನು 7-5 ಅಂತರದಿಂದ ವಶಪಡಿಸಿಕೊಂಡರು. 4ನೇ ಸೆಟ್ನಲ್ಲೂ ಮೇಲುಗೈ ಸಾಧಿಸಿದ ಶಾಂಗ್ 6-4 ಅಂತರದಿಂದ ಜಯಶಾಲಿಯಾದರು.
ಸಮಗ್ರ ಪ್ರದರ್ಶನ ನೀಡಿದ ಶಾಂಗ್ ಅವರು ನಾಗಲ್ ವಿರುದ್ಧ ವಿಜಯಶಾಲಿಯಾದರು. ನಗಾಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಗಮನಾರ್ಹ ಬಹುಮಾನ ಮೊತ್ತ ಪಡೆದು ನಿರ್ಗಮಿಸಿದರು.
ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ದ್ವಿತೀಯ ಸುತ್ತಿಗೆ ಲಗ್ಗೆ
ಡಬಲ್ಸ್ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯದ ಜೋಡಿ ರೋಹನ್ ಬೋಪಣ್ಣ ಹಾಗೂ ಮ್ಯಾಥ್ಯೂ ಎಬ್ಡೆನ್ ಮೊದಲ ಸೆಟ್ನಲ್ಲಿ 0-5 ಹಿನ್ನಡೆಯಿಂದ ಚೇತರಿಸಿಕೊಂಡು ಸ್ಥಳೀಯ ಆಟಗಾರರಾದ ಜೇಮ್ಸ್ ಡಕ್ವರ್ತ್ ಹಾಗೂ ಮಾರ್ಕ್ ಪೋಲ್ಮನ್ಸ್ರನ್ನು 7-6(5), 4-6, 8-6(2) ಸೆಟ್ ಗಳಿಂದ ಸೋಲಿಸಿದರು.
ಯುಎಸ್ ಓಪನ್ ಫೈನಲಿಸ್ಟ್ ಬೋಪಣ್ಣ-ಎಬ್ಡೆನ್ ವೈರ್ಲ್ಡ್ಕಾರ್ಡ್ ಆಟಗಾರರಾದ ಡಕ್ವರ್ತ್ ಹಾಗೂ ಪೋಲ್ಮನ್ಸ್ ವಿರುದ್ಧ ಅಂತಿಮ ಸೆಟ್ಟನ್ನು ಟೈ-ಬ್ರೇಕರ್ನಲ್ಲಿ ಗೆದ್ದುಕೊಂಡು ಎರಡನೇ ಸುತ್ತು ಪ್ರವೇಶಿಸಿದರು.
ಬೋಪಣ್ಣ-ಎಬ್ಡೆನ್ ಶುಕ್ರವಾರ ನಡೆಯಲಿರುವ 2ನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಇನ್ನೊಂದು ಜೋಡಿ ಜಾನ್ ಮಿಲ್ಮ್ಯಾನ್ ಹಾಗೂ ಎಡ್ವರ್ಡ್ ವಿಂಟರ್ ಅವರನ್ನು ಎದುರಿಸಲಿದ್ದಾರೆ.
ಭಾರತದ ಜೋಡಿ ವಿಜಯ್ ಸುಂದರ್ ಹಾಗೂ ಅನಿರುದ್ದ್ ಚಂದ್ರಶೇಖರ್ ಹಂಗೇರಿಯದ ಜೋಡಿ ಮಾರ್ಟನ್ ಫುಕ್ಸೋವಿಕ್ಸ್ ಹಾಗೂ ಫ್ಯಾಬಿಯನ್ ಮರೋಸಾನ್ ವಿರುದ್ಧ 3-6, 4-6 ಅಂತರದಿಂದ ಸೋತಿದ್ದಾರೆ.