ಅಮೆರಿಕಾದ ವಕ್ಲಾವ್ ಹೇವೆಲ್ ಸೆಂಟರ್ನ ʼಡಿಸ್ಟರ್ಬಿಂಗ್ ದಿ ಪೀಸ್ʼ ಪ್ರಶಸ್ತಿಗೆ ಆಯ್ಕೆಯಾದ ಲೇಖಕಿ ಅರುಂಧತಿ ರಾಯ್
ಅರುಂಧತಿ ರಾಯ್ (Photo: PTI)
ಹೊಸದಿಲ್ಲಿ: ಖ್ಯಾತ ಲೇಖಕಿ ಅರುಂಧತಿ ರಾಯ್ ಅವರು ಅಮೆರಿಕಾದ ಲಾಭೋದ್ದೇಶ ರಹಿತ ಸಂಸ್ಥೆ ವಕ್ಲಾವ್ ಹೇವೆಲ್ ಸೆಂಟರ್ ನೀಡುವ 2024 “ಡಿಸ್ಟರ್ಬಿಂಗ್ ದಿ ಪೀಸ್” ಪ್ರಶಸ್ತಿಯನ್ನು ಗಳಿಸಿದ್ದಾರೆ. ರಾಯ್ ಅವರು ಈ ಪ್ರಶಸ್ತಿಯನ್ನು ಇರಾನಿಯನ್ ರ್ಯಾ ಪರ್ ತೂಮಜ್ ಸಲೇಹಿ ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ. ಇರಾನ್ ಸರ್ಕಾರದ ರಾಜಕೀಯ ದೌರ್ಜನ್ಯವನ್ನು ಖಂಡಿಸಿರುವ ಹಾಡುಗಳಿಗಾಗಿ ಸಲೇಹಿ ಖ್ಯಾತಿ ಪಡೆದಿದ್ದಾರೆ.
ಅಪಾಯದಲ್ಲಿರುವ ದಿಟ್ಟ ಬರಹಗಾರರಿಗೆ ನೀಡಲಾಗುವ ಪ್ರಶಸ್ತಿಯನ್ನು ಅರುಂಧತಿ ರಾಯ್ ಅವರಿಗೆ ನೀಡಲಾಗಿದೆ ಎಂದು ಸೆಂಟರ್ ತನ್ನ ಪೋಸ್ಟ್ ಒಂದರಲ್ಲಿ ಹೇಳಿದೆ.
ರಾಯ್ ಅವರು ಭಾರತದಲ್ಲಿ ತುಳಿತಕ್ಕೊಳಗಾದವರ ಪರ ದನಿಯೆತ್ತಿದ್ದಾಋೆ, ದೊಡ್ಡ ಉದ್ಯಮಿಗಳಿಂದ ತಮ್ಮ ಭೂಮಿ ಕಳೆದುಕೊಂಡವರ ಪರ, ದಲಿತರ ಪರ ಮತ್ತು ಇತರ ಸಂತ್ರಸ್ತರ ಪರ ದನಿಯೆತ್ತುವ ಲೇಖಕಿಯಾಗಿದ್ದಾರೆ ಎಂದು ಸೆಂಟರ್ ಹೇಳಿದೆ.
ವಕ್ಲಾವ್ ಹೇವೆಲ್ ಸೆಂಟರ್ ಪ್ರತಿ ವರ್ಷ “ದಿಟ್ಟ ಅಸಮ್ಮತಿಕಾರರಿಗೆ” ಪ್ರಶಸ್ತಿ ನೀಡಿ ಮಾನವ ಹಕ್ಕುಗಳಿಗಾಗಿ ಹೋರಾಡುವ ಜಾಗತಿಕ ಲೇಖಕರತ್ತ ಬೆಳಕು ಚೆಲ್ಲಲು ಯತ್ನಿಸುತ್ತದೆ.