ಸಾಲ ತೀರಿಸಲು ಕಿಡ್ನಿ ಮಾರಿ ವಂಚನೆಗೊಳಗಾದ ಆಟೋ ಚಾಲಕ
30 ಲಕ್ಷ ರೂ. ಕೊಡುತ್ತೇವೆಂದು ಕೇವಲ 50 ಸಾವಿರ ರೂ. ನೀಡಿ ವಂಚನೆ!
PC : X \ @umasudhir
ಗುಂಟೂರು : ಕಿಡ್ನಿ ಮಾರಿದರೆ 30 ಲಕ್ಷ ರೂ. ಸಿಗುತ್ತದೆ, ಅದರಲ್ಲಿ ತನ್ನ ಸಾಲ ತೀರಿಸಬಹುದು ಎಂದು ನಂಬಿ ಕಿಡ್ನಿ ಮಾರಿದ ಆಟೋ ಚಾಲಕರೊಬ್ಬರು ವಂಚನೆಗೊಳಗಾದ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ವರದಿಯಾಗಿದೆ.
ಗುಂಟೂರಿನ ಆಟೋ ಚಾಲಕ ಜಿ ಮಧು ಬಾಬು ವಂಚನೆಗೊಳಗಾದವರು ಎಂದು ತಿಳಿದು ಬಂದಿದೆ. ಮೊಬೈಲ್ ಆ್ಯಪ್, ಸ್ಥಳೀಯ ಸಾಲಗಾರರ ಮೂಲಕ ಸಾಲ ಮಾಡಿದ್ದ ಮಧು, ಅದನ್ನು ತೀರಿಸಲು ಸಾಧ್ಯವಾಗದೇ ಕಿಡ್ನಿ ಮಾರಲು ಮುಂದಾಗಿದ್ದಾರೆ. ಇದೇ ಸಂದರ್ಭ ಫೇಸ್ಬುಕ್ ನಲ್ಲಿ ಕಿಡ್ನಿ ಮಾರಿದರೆ ದುಬಾರಿ ಹಣ ಸಿಗುವ ಜಾಹೀರಾತಿಗೆ ಅವರ ಕಣ್ಣಿಗೆ ಬಿದ್ದಿದೆ.
ಅಂಗಾಂಗ ಮಾರಾಟ ಅಕ್ರಮ ಎಂದು ಗೊತ್ತಿದ್ದರೂ ಬೇರೆ ದಾರಿಯಿಲ್ಲದೇ ಜಾಹೀರಾತು ಹಾಕಿದ್ದ ವ್ಯಕ್ತಿಯನ್ನು ಮಧು ಸಂಪರ್ಕಿಸಿದ್ದಾರೆ. ಬಳಿಕ, ಕಳೆದ ವರ್ಷ ನವೆಂಬರ್ನಿಂದ ಮಧು ಬಾಬು ವೈದ್ಯಕೀಯ ಪರೀಕ್ಷೆ ಮತ್ತು ಸಮಾಲೋಚನೆಗೆ ಆಗಾಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ತಾವು ಕಿಡ್ನಿ ದಾನ ನೀಡಲಿರುವ ರೋಗಿಯ ಕುಟುಂಬವನ್ನು ಭೇಟಿಯಾದಾಗ, ಅವರು ಪ್ರಯಾಣ ಮತ್ತು ವೈದ್ಯಕೀಯ ವೆಚ್ಚಕ್ಕಾಗಿ ಸಣ್ಣ ಮೊತ್ತವನ್ನು ನೀಡಿದ್ದಾರೆ. ರೋಗಿಯ ಕುಟುಂಬದವರು ಎಂದು ತೋರಿಸುವ ನಕಲಿ ದಾಖಲೆಯನ್ನೂ ಸೃಷ್ಟಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಸ್ತ್ರಚಿಕಿತ್ಸೆಗೂ ಮುನ್ನ ಮಧು ಬಾಬು ಅವರಿಗೆ 50,000 ರೂ. ಪಾವತಿಸಿ, ಉಳಿದ ಮೊತ್ತವನ್ನು ಶಸ್ತ್ರಚಿಕಿತ್ಸೆಯ ನಂತರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಕಿಡ್ನಿ ಮಾರಿದರೆ ಸಿಗುವ ಹಣದಲ್ಲಿ ತನ್ನ ಎಲ್ಲಾ ಸಾಲಗಳನ್ನು ಮರುಪಾವತಿಸಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಲು ಸಹಾಯ ಮಾಡುತ್ತದೆ ಎಂದು ಭಾವಿಸಿದ ಮಧು ಬಾಬು ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ.
Trapped by loan apps, 31-yr-old autodriver from Guntur donated kidney thru agent who told him about ad on Faceook & promised Rs 30 lakh for a kidney; fake documents were created, surgery happened at Vijaya Super Speciality Hosp in Vijayawada but 7 months later he got only Rs 50k pic.twitter.com/Kx0jVir9RJ
— Uma Sudhir (@umasudhir) July 8, 2024
ಆದರೆ ಕಿಡ್ನಿ ಮಾರಿದ್ದಕ್ಕೆ 30 ಲಕ್ಷ ರೂ. ಬದಲು ಕೇವಲ 50 ಸಾವಿರ ರೂ. ನೀಡಿ ವಂಚಿಸಲಾಗಿದೆ. ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮಧು ಬಾಬು ಈಗ ಗುಂಟೂರಿನ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.