ಜನಪ್ರಿಯ ಯುಪಿಎಸ್ಸಿ ಶಿಕ್ಷಕ ಅವಧ್ ಓಜಾ ಆಪ್ ಸೇರ್ಪಡೆ
Photo: X/@AamAadmiParty
ಹೊಸದಿಲ್ಲಿ: ʼಓಝಾ ಸರ್ʼ ಎಂದೇ ಜನಪ್ರಿಯರಾಗಿರುವ, ಉತ್ತರ ಪ್ರದೇಶದ ಗೊಂಡಾದಲ್ಲಿನ ಯುಪಿಎಸ್ಸಿ ಶಿಕ್ಷಕ ಅವಧ್ ಓಜಾ ಸೋಮವಾರ ಆಮ್ ಆದ್ಮಿ ಪಕ್ಷ ಸೇರ್ಪಡೆಯಾದರು. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹಾಗೂ ಹಿರಿಯ ನಾಯಕ ಮನೀಷ್ ಸಿಸೋಡಿಯಾರೊಂದಿಗೆ ಆಮ್ ಆದ್ಮಿ ಪಕ್ಷದ ಕಚೇರಿಗೆ ತಲುಪಿದ ಅವಧ್ ಓಜಾ, ಅವರಿಬ್ಬರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಪಕ್ಷಕ್ಕೆ ಸೇರ್ಪಡೆಯಾದ ನಂತರ, ರಾಜಕೀಯಕ್ಕೆ ಪ್ರವೇಶಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ತಮಗೆ ಅವಕಾಶ ನೀಡಿದ ಕೇಜ್ರಿವಾಲ್ ಹಾಗೂ ಸಿಸೋಡಿಯಾ ಸೇರಿದಂತೆ ಆಮ್ ಆದ್ಮಿ ಪಕ್ಷದ ನಾಯಕತ್ವಕ್ಕೆ ಅವಧ್ ಓಜಾ ಧನ್ಯವಾದ ಸಲ್ಲಿಸಿದರು. ರಾಜಕೀಯ ಪ್ರವೇಶಿಸಿದ ನಂತರ, ಶೈಕ್ಷಣಿಕ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದು ನನ್ನ ಪ್ರಮುಖ ಆದ್ಯತೆ ಎಂದು ಅವರು ಹೇಳಿದರು.
“ಅವಧ್ ಓಜಾ ಲಕ್ಷಾಂತರ ಯುವಕರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಉದ್ಯೋಗಿಗಳನ್ನಾಗಿಸಿ, ಉತ್ತಮ ಜೀವನ ನಡೆಸುವಂತೆ ಮಾಡಿದ್ದಾರೆ. ಅವರು ರಾಜಕೀಯವನ್ನು ಪ್ರವೇಶಿಸಿರುವುದರಿಂದ, ದೇಶದ ಶೈಕ್ಷಣಿಕ ವಲಯಕ್ಕೆ ಲಾಭವಾಗಲಿದ್ದು, ದೇಶದ ಅಭಿವೃದ್ಧಿಗೆ ದೊಡ್ಡ ಪ್ರಮಾಣದಲ್ಲಿ ನೆರವು ದೊರೆಯಲಿದೆ” ಎಂದು ಅರವಿಂದ್ ಕೇಜ್ರಿವಾಲ್ ಶ್ಲಾಘಿಸಿದರು.
ಗೊಂಡಾದಲ್ಲಿ ಜನಿಸಿದ ಅವಧ್ ಓಜಾರ ತಾಯಿ ವಕೀಲರಾಗಿದ್ದರೆ, ತಂದೆ ಪೋಸ್ಟ್ ಮಾಸ್ಟರ್ ಆಗಿದ್ದರು. ಅವರು ಗೊಂಡಾದ ಫಾತಿಮಾ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಓಜಾರ ಪೋಷಕರು ತಮ್ಮ ಪುತ್ರ ವೈದ್ಯನಾಗಬೇಕು ಎಂದು ಬಯಸಿದ್ದರು. ಆದರೆ, ಓಜಾ ಮಾತ್ರ ತಾನು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು ಎಂದು ಕನಸು ಕಂಡಿದ್ದರು.
ಆದರೆ, ತಮ್ಮ ಪೋಷಕರ ಬಯಕೆಯನ್ನು ಭಂಗಗೊಳಿಸಿದರೂ, ಓಜಾ ತಮ್ಮ ಪ್ರಥಮ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿಫಲಗೊಂಡು ಮನೆಯಿಂದ ಹೊರ ದಬ್ಬಿಸಿಕೊಂಡ ಓಜಾ, ನಂತರ, ತರಬೇತಿ ಸಂಸ್ಥೆಯೊಂದರಲ್ಲಿ ಇತಿಹಾಸ ಬೋಧಿಸುವ ಅವಕಾಶ ಪಡೆದರು.
2005ರಲ್ಲಿ ದಿಲ್ಲಿಗೆ ಆಗಮಿಸಿದ ಓಜಾ, ರಾಷ್ಟ್ರ ರಾಜಧಾನಿಯಲ್ಲಿನ ಮುಖರ್ಜಿ ನಗರ್ ಪ್ರದೇಶದಲ್ಲಿ ಯುಪಿಎಸ್ಸಿ ತರಬೇತಿ ಸಂಸ್ಥೆಯನ್ನು ತೆರೆದರು. ಹೊಸದಿಲ್ಲಿಯಲ್ಲಿನ ಹಲವಾರು ಪ್ರಖ್ಯಾತ ಐಎಎಸ್ ತರಬೇತಿ ಸಂಸ್ಥೆಗಳಲ್ಲಿ ಬೋಧಕರಾಗಿ ಕೆಲಸ ಮಾಡಿರುವ ಓಜಾ, 2019ರಲ್ಲಿ ಐಕ್ಯೂಆರ್ಎ ಐಎಎಸ್ ಅಕಾಡೆಮಿಯನ್ನು ಸ್ಥಾಪಿಸಿದ್ದರು.