ಹೊರಸೂಸುವಿಕೆಗಳು ಮುಂದುವರಿದರೆ 2047ರ ವೇಳೆಗೆ ದೇಶದಲ್ಲಿ ಸರಾಸರಿ ತಾಪಮಾನ 1.5 ಡಿ.ಸೆ. ಹೆಚ್ಚಲಿದೆ: ವರದಿ
PC : PTI
ಹೊಸದಿಲ್ಲಿ: ಅಝೀಂ ಪ್ರೇಮಜಿ ವಿವಿಯ ಸಂಶೋಧಕರು ರವಿವಾರ ಬಿಡುಗಡೆಗೊಳಿಸಿದ ನೂತನ ವರದಿಯ ಪ್ರಕಾರ, ಇಂಗಾಲ ಹೊರಸೂಸುವಿಕೆಗಳು ಪ್ರಸಕ್ತ ದರದಲ್ಲಿ ಮುಂದುವರಿದರೆ 2047ರ ವೇಳೆಗೆ ದೇಶದಲ್ಲಿ ಸರಾಸರಿ ತಾಪಮಾನವು 1.5 ಡಿ.ಸೆ. ನಷ್ಟು ಹೆಚ್ಚಲಿದೆ.
‘ಭಾರತಕ್ಕಾಗಿ ಹವಾಮಾನ ಬದಲಾವಣೆಯ ಪ್ರಕ್ಷೇಪಗಳು(2021-2040)’ ಶೀರ್ಷಿಕೆಯ ವರದಿಯು,ದೇಶದ ಪೂರ್ವ ಮತ್ತು ಈಶಾನ್ಯ ಭಾಗಗಳಿಗೆ ಹೋಲಿಸಿದರೆ ಪಶ್ಚಿಮ ಭಾಗದಲ್ಲಿ ಮಳೆಯ ಪ್ರಮಾಣವು ಗಮನಾರ್ಹವಾಗಿ ಹೆಚ್ಚಲಿದೆ ಎಂದು ಅಂದಾಜಿಸಿದೆ.
ವರದಿಯು ಎರಡು ವಿಭಿನ್ನ ಸನ್ನಿವೇಶಗಳನ್ನು ಬಳಸಿಕೊಂಡು ಭವಿಷ್ಯದಲ್ಲಿ ಭಾರತದಲ್ಲಿ ಹವಾಮಾನ ಬದಲಾವಣೆಯನ್ನು ಪರಿಶೀಲಿಸಿದೆ.
ಮೊದಲ ಸನ್ನಿವೇಶದಲ್ಲಿ ಇಂಗಾಲ ಹೊರಸೂಸುವಿಕೆಯಲ್ಲಿ ಮಧ್ಯಮ ಪ್ರಮಾಣದ ಕಡಿತವನ್ನು ಸಾಧಿಸಿದರೆ ಸರಾಸರಿ ವಾರ್ಷಿಕ ತಾಪಮಾನವು ಏರಿಕೆಯಾಗಲು ಇನ್ನೂ ಹತ್ತು ವರ್ಷಗಳನ್ನು ತೆಗೆದುಕೊಳ್ಳಬಹುದು,ಅಂದರೆ 2057ರ ವೇಳೆಗೆ 1.5 ಡಿ.ಸೆ. ಏರಿಕೆಯನ್ನು ಕಾಣಬಹುದು. ಎರಡನೇ ಸನ್ನಿವೇಶದಲ್ಲಿ ಪಳೆಯುಳಿಕೆ ಇಂಧನ ಆಧರಿತ ಅಭಿವೃದ್ಧಿಯು (ಅಧಿಕ ಇಂಗಾಲ ಹೊರಸೂಸುವಿಕೆಯ ಮುಂದುವರಿಕೆ ಮತ್ತು ಪಳೆಯುಳಿಕೆ ಇಂಧನಗಳ ಮೇಲೆ ಹೆಚ್ಚಿನ ಅವಲಂಬನ) 294 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನಗಳು ಪ್ರತಿ ವರ್ಷ ಒಂದು ಡಿ.ಸೆ.ನಷ್ಟು ಹೆಚ್ಚಲು ಕಾರಣವಾಗಲಿದೆ. ಈ ಪೈಕಿ 16 ಜಿಲ್ಲೆಗಳು ಹಿಮಾಲಯ ಪ್ರದೇಶದಲ್ಲಿವೆ.
ಪಶ್ಚಿಮ ಭಾರತದಲ್ಲಿ ಶೇ.20ರಿಂದ ಶೇ.60ರಷ್ಟು ಹೆಚ್ಚು ಮಳೆಯಾಗಲಿದೆ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಮಳೆಯ ಗಣನೀಯ ಕೊರತೆಯಾಗಲಿದೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಬರ ಸ್ಥಿತಿಗಳು ಸ್ಥಳೀಯ ಕೃಷಿಯ ಮೇಲೆ ತೀವ್ರ ಪರಿಣಾಮಗಳನ್ನು ಬೀರಬಹುದು ಎಂದು ವರದಿಯು ಅಂದಾಜಿಸಿದೆ.
ವಾರ್ಷಿಕ ಮಳೆ ಪ್ರಮಾಣದಲ್ಲಿ ಗಮನಾರ್ಹ ಏರಿಕೆಯಿಂದಾಗಿ ಗುಜರಾತ್, ರಾಜಸ್ಥಾನ ಮತ್ತು ಲಡಾಖ್ ತೀವ್ರ ಪ್ರವಾಹಗಳಿಗೆ ತುತ್ತಾಗುವ ಸಾಧ್ಯತೆಯಿದೆ ಎಂದು ಹೇಳಿರುವ ವರದಿಯು, ಮಳೆಯಿಂದಾಗಿ ಹೆಚ್ಚಿನ ಮಣ್ಣು ಸವೆತವು ಮಣ್ಣಿನ ಫಲವತ್ತತೆ ಮತ್ತು ಕೃಷಿ ಉತ್ಪಾದನೆ ಕುಸಿಯಲು ಕಾರಣವಾಗಲಿದೆ ಎಂದೂ ತಿಳಿಸಿದೆ.
ಲಡಾಖ್ನಂತಹ ಎತ್ತರದ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯು ಭೂಕುಸಿತಗಳು ಮತ್ತು ಪ್ರವಾಹಗಳಂತಹ ಹವಾಮಾನ ಪ್ರೇರಿತ ವಿಪತ್ತುಗಳಿಗೆ ಕಾರಣವಾಗಬಹುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯ ಸಾಂಪ್ರದಾಯಿಕ ಮಣ್ಣಿನ ಮನೆಗಳಿಗೆ ಗಣನೀಯ ಹಾನಿಯನ್ನುಂಟು ಮಾಡಬಹುದು. ಉತ್ತರ,ಮಧ್ಯ ಮತ್ತು ಈಶಾನ್ಯರಾಜ್ಯಗಳಲ್ಲಿ ಬರದಂತಹ ಪರಿಸ್ಥಿತಿಗಳು ಕೃಷಿ ಉತ್ಪನ್ನಗಳಿಗೆ ಹಾನಿಯನ್ನುಂಟು ಮಾಡುವ ಸಾಧ್ಯತೆಯಿದ್ದು, ಇದು ಸಾಂಪ್ರದಾಯಕ ಕೃಷಿ ಪದ್ಧತಿಗಳನ್ನು ಅವಲಂಬಿಸಿರುವ ಗ್ರಾಮೀಣ ಸಮುದಾಯಗಳನ್ನು ತೊಂದರೆಗೆ ಸಿಲುಕಿಸುತ್ತದೆ ಎಂದು ವರದಿಯು ಹೇಳಿದೆ.