ಸಂವಿಧಾನದ 8ನೇ ಶೆಡ್ಯೂಲ್ ಗೆ ತುಳು ಭಾಷೆ ಸೇರ್ಪಡೆಯ ಅಗತ್ಯದ ಅರಿವಿದೆ : ಕೇಂದ್ರ
ಸಚಿವ ನಿತ್ಯಾನಂದರಾಯ್ | PC : PTI
ಹೊಸದಿಲ್ಲಿ : ತುಳು ಸೇರಿದಂತೆ ಕೆಲವು ಭಾಷೆಗಳನ್ನು ಸಂವಿಧಾನದ ಎಂಟನೇ ಶೆಡ್ಯೂಲ್ಗೆ ಸೇರ್ಪಡೆಗೊಳಿಸುವ ಅಗತ್ಯವನ್ನು ಹಾಗೂ ಆ ಕುರಿತಾದ ಭಾವನೆಗಳ ಬಗ್ಗೆ ಸರಕಾರಕ್ಕೆ ಅರಿವಿದೆ ಎಂದು ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದರಾಯ್ ಅವರು ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ.
ದಕ್ಷಿಣ ಕನ್ನಡದ ಬಿಜೆಪಿ ಸಂಸದ ಬ್ರಿಜೇಶ್ ಚೌಟ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಕುರಿತ ಜನತೆಯ ಭಾವನೆಗಳು ಮತ್ತಿತರ ಪ್ರಸಕ್ತ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ತುಳು ಮತ್ತಿತರ ಭಾಷೆಗಳನ್ನು ಸಂವಿಧಾನದ ಎಂಟನೇ ಶೆಡ್ಯೂಲ್ಗೆ ಸೇರ್ಪಡೆಗೊಳಿಸುವ ವಿಚಾರವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದರು.
ಭಾರತದ ಸಂವಿಧಾನದ 8ನೇ ಶೆಡ್ಯೂಲ್ಗೆ ಒಟ್ಟು 22 ಭಾಷೆಗಳನ್ನು ಈವರೆಗೆ ಸೇರ್ಪಡೆಗೊಳಿಸಲಾಗಿದೆ. ತುಳು ಸೇರಿದಂತೆ ಹಲವಾರು ಭಾಷೆಗಳನ್ನು ಸಂವಿಧಾನದ 8ನೇ ಶೆಡ್ಯೂಲ್ಗೆ ಸೇರ್ಪಡೆಗೊಳಿಸಬೇಕೆಂಬ ಬೇಡಿಕೆಗಳು ಬರುತ್ತಿವೆ ಎಂದರು.
ಸಂವಿಧಾನದ ಎಂಟನೇ ಶೆಡ್ಯೂಲ್ಗೆ ಯಾವುದೇ ಭಾಷೆಯನ್ನು ಸೇರ್ಪಡೆಗೊಂಳಿಸುವ ಕುರಿತು ಪರಿಶೀಲನೆ ನಡೆಸುವುದಕ್ಕೆ ನಿಗದಿತ ಮಾನದಂಡವಿರುವುದಿಲ್ಲವೆಂದು ರಾಯ್ ಸ್ಪಷ್ಟಪಡಿಸಿದರು.
ಭಾಷೆಗಳು ಹಾಗೂ ಉಪಭಾಷೆಗಳ ವಿಕಾಸವು ಒಂದು ಕ್ರಿಯಾಶೀಲ ಪ್ರಕ್ರಿಯೆಯಾಗಿದ್ದು, ಸಾಮಾಜಿಕ-ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ಬೆಳವಣಿಗೆಗಳಿಂದ ಪ್ರಭಾವಿತವಾಗಿರುತ್ತದೆ. ಆದುದರಿಂದ ಸಂವಿಧಾನದ ಎಂಟನೇ ಶೆಡ್ಯೂಲ್ನಲ್ಲಿ ಭಾಷೆಗಳ ಸೇರ್ಪಡೆಗೆ ಯಾವುದೇ ಮಾನದಂಡವನ್ನು ನಿಗದಿಪಡಿಸುವುದು ಕಠಿಣವೆಂದು ಅವರು ಹೇಳಿದರು. ಪಹ್ವಾ ಸಮಿತಿ (1996) ಹಾಗೂ ಮಹಾಪಾತ್ರ ಸಮಿತಿ (2003), ಈ ಮೊದಲು ಸಂವಿಧಾನದ ಎಂಟನೇ ಶೆಡ್ಯೂಲ್ಗೆ ಭಾಷೆಗಳ ಸೇರ್ಪಡೆಗೆ ಮಾನದಂಡವನ್ನು ನಿಗದಿಪಡಿಸಲು ಪ್ರಯತ್ನಗಳು ನಡೆದಿತ್ತಾವಾದರೂ, ಯಾವುದೇ ತೀರ್ಮಾನಕ್ಕೆ ಬರಲು ಸಾದ್ಯವಾಗಿರಲಿಲ್ಲವೆಂದು ಸಚಿವ ರಾಯ್ ಸದನಕ್ಕೆ ತಿಳಿಸಿದರು.