ಐಪಿಎಲ್ 2025 | ದಿಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಅಕ್ಷರ್ ಪಟೇಲ್ ಆಯ್ಕೆ

ಅಕ್ಷರ್ ಪಟೇಲ್ (Photo: PTI)
ಹೊಸದಿಲ್ಲಿ:ಮುಂಬರುವ ಐಪಿಎಲ್ ಋತುವಿಗೆ ದಿಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಭಾರತ ತಂಡದ ಆಲ್ ರೌಂಡರ್ ಅಕ್ಷರ್ ಪಟೇಲ್ ಆಯ್ಕೆಯಾಗಿದ್ದಾರೆ.
2019ರಿಂದ ದಿಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಅಕ್ಷರ್ ಪಟೇಲ್, ಇದೀಗ ತಂಡದಲ್ಲಿ ಸುದೀರ್ಘ ಕಾಲದಿಂದ ಇರುವ ಏಕೈಕ ಆಟಗಾರರಾಗಿದ್ದಾರೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ನಡೆದಿದ್ದ ಹರಾಜು ಪ್ರಕ್ರಿಯೆಗೂ ಮುನ್ನ, ದಿಲ್ಲಿ ಕ್ಯಾಪಿಟಲ್ಸ್ ತಂಡ ಉಳಿಸಿಕೊಂಡಿದ್ದ ಆಟಗಾರರ ಪೈಕಿ, ಅಕ್ಷರ್ ಪಟೇಲ್ ಅತ್ಯಧಿಕ ಸಂಭಾವನೆ ಪಡೆದಿದ್ದರು. ಅವರಿಗೆ 16.50 ಕೋಟಿ ರೂ. ಸಂಭಾವನೆ ನೀಡಿ ತಂಡದಲ್ಲಿ ಉಳಿಸಿಕೊಳ್ಳಲಾಗಿತ್ತು.
ದಿಲ್ಲಿ ಕ್ಯಾಪಿಟಲ್ಸ್ ಪರ ಇಲ್ಲಿಯವರೆಗೆ 82 ಪಂದ್ಯಗಳನ್ನಾಡಿರುವ ಅಕ್ಷರ್ ಪಟೇಲ್, ಒಟ್ಟು 967 ರನ್ ಗಳಿಸಿದ್ದು, 62 ವಿಕೆಟ್ ಗಳನ್ನು ಕಿತ್ತಿದ್ದಾರೆ.
ಐಪಿಎಲ್ ಪಂದ್ಯಾವಳಿಯಲ್ಲಿ ಅಕ್ಷರ್ ಪಟೇಲ್ ಗೆ ಅಂತಹ ಹೇಳಿಕೊಳ್ಳುವಂತಹ ನಾಯಕತ್ವದ ಅನುಭವವಿಲ್ಲದಿದ್ದರೂ, 2024-25ನೇ ಸಾಲಿನ ಮುಷ್ತಾಕ್ ಅಲಿ ಟ್ರೋಫಿ ಹಾಗೂ ವಿಜಯ್ ಹಝಾರೆ ಟ್ರೋಫಿ ಸೇರಿದಂತೆ, ದೇಶೀಯ ಕ್ರಿಕೆಟ್ ನಲ್ಲಿ ಅವರು ಗುಜರಾತ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅಕ್ಷರ್ ಪಟೇಲ್, “ದಿಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ನನಗೆ ದೊರೆತಿರುವ ಬಹು ದೊಡ್ಡ ಗೌರವವಾಗಿದೆ. ನನ್ನಲ್ಲಿ ವಿಶ್ವಾಸವಿರಿಸಿದ ತಂಡದ ಮಾಲಕರು ಹಾಗೂ ಸಿಬ್ಬಂದಿಗಳಿಗೆ ನಾವು ಆಭಾರಿಯಾಗಿದ್ದೇನೆ” ಎಂದು ಹೇಳಿದ್ದಾರೆ.