ಅಯೋಧ್ಯೆ: ಮದುವೆಯ ಗೌಜಿ ಮುಗಿಯುವ ಮುನ್ನವೇ ಪತ್ನಿಯನ್ನು ಕೊಂದು ನವವಿವಾಹಿತ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಅಯೋಧ್ಯೆ(ಉ.ಪ್ರ): ಅಯೋಧ್ಯೆಯಲ್ಲಿ ನವವಿವಾಹಿತನೋರ್ವ ಮದುವೆಯಾದ ಕೆಲವೇ ಗಂಟೆಗಳಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಯೋಧ್ಯೆ ಕಂಟೋನ್ಮೆಂಟ್ ಪೋಲಿಸ್ ಠಾಣಾ ವ್ಯಾಪ್ತಿಯ ಸಾದತ್ ಗಂಜ್ ಪ್ರದೇಶದ ನಿವಾಸಿ ಪ್ರದೀಪ್ ಶನಿವಾರ ಶಿವಾನಿಯನ್ನು ಮದುವೆಯಾಗಿದ್ದ. ಮದುವೆಯ ಬಳಿಕ ಅಪರಾಹ್ನ ದಿಬ್ಬಣವು ವರನ ಮನೆಗೆ ಮರಳಿದ್ದು,ದಿನವಿಡೀ ವಿವಾಹಾನಂತರದ ವಿಧಿಗಳು ನಡೆದಿದ್ದವು. ರಾತ್ರಿ ವಧು ಮತ್ತು ವರ ಮಲಗಲು ತಮ್ಮ ಕೋಣೆಗೆ ತೆರಳಿದ್ದರು ಎಂದು ತಿಳಿಸಿದ ಹಿರಿಯ ಎಸ್ಪಿ ರಾಜಕರಣ ನಯ್ಯರ್ ಅವರು,ರವಿವಾರ ಬೆಳಿಗ್ಗೆ ದಂಪತಿ ಕೋಣೆಯಿಂದ ಹೊರಬಂದಿರಲಿಲ್ಲ.ಪದೇ ಪದೇ ಬಾಗಿಲು ಬಡಿದರೂ ಪ್ರತಿಕ್ರಿಯಿಸಿರಲಿಲ್ಲ. ನಂತರ ಕುಟುಂಬ ಸದಸ್ಯರು ಬಲಪ್ರಯೋಗದಿಂದ ಬಾಗಿಲು ಒಡೆದು ನೋಡಿದಾಗ ಶಿವಾನಿಯ ಮೃತದೇಹವು ಹಾಸಿಗೆಯಲ್ಲಿ ಕಂಡು ಬಂದಿತ್ತು ಮತ್ತು ಪ್ರದೀಪ್ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪತ್ತೆಯಾಗಿತ್ತು ಎಂದರು.
ಕೋಣೆಗೆ ಒಳಗಿನಿಂದ ಚಿಲಕ ಹಾಕಿದ್ದರಿಂದ ವರ ಆತ್ಮಹತ್ಯೆ ಮುನ್ನ ವಧುವನ್ನು ಕೊಂದಿರುವಂತೆ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅವರು ತಿಳಿಸಿದರು.