ಅಯೋಧ್ಯೆ ಅತ್ಯಾಚಾರ ಪ್ರಕರಣ: ಡಿಸಿಎಂ ಮಂಪರು ಪರೀಕ್ಷೆಗೆ ಎಸ್ ಪಿ ಮುಖಂಡ ಆಗ್ರಹ
ಶಿವಪಾಲ್ ಸಿಂಗ್ ಯಾದವ್ | ಕೇಶವ ಪ್ರಸಾದ್ ಮೌರ್ಯ (PTI)
ಅಯೋಧ್ಯೆ: ಅತ್ಯಾಚಾರ ಪ್ರಕರಣವೊಂದರ ಸಂಬಂಧ ಪ್ರಮುಖ ಆರೋಪಿ ಮತ್ತು ಸಮಾಜವಾದಿ ಪಕ್ಷದ ಮುಖಂಡರೊಬ್ಬರ ವಿರುದ್ಧ 'ಬುಲ್ಡೋಜರ್ ಕ್ರಮ' ಕೈಗೊಂಡ ಬೆನ್ನಲ್ಲೇ ಪ್ರಕರಣದ ಬಗ್ಗೆ ಸಮಾಜವಾದಿ ಪಕ್ಷ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ಕೆಸರೆರಚಾಟ ಆರಂಭವಾಗಿದೆ.
ಸಮಾಜವಾದಿ ಪಕ್ಷ ಅತ್ಯಾಚಾರಿಗಳನ್ನು ರಕ್ಷಿಸಲು ಯತ್ನಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಆಪಾದಿಸಿದ್ದಾರೆ. ಈ ಮಧ್ಯೆ ಎಸ್ಪಿ ಮುಖಂಡ ಹಾಗೂ ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್, ಆರೋಪಿ ಹಾಗೂ ಉಪಮುಖ್ಯಮಂತ್ರಿ ಇಬ್ಬರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯ ಪುರಕಲಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಭದರ್ಸಾ ನಗರದಲ್ಲಿ ಬೇಕರಿ ನಡೆಸುತ್ತಿದ್ದ ಮೊಯಿದ್ ಖಾನ್ ಹಾಗೂ ಆತನ ಉದ್ಯೋಗಿ ರಾಜು ಖಾನ್ ಎಂಬವರನ್ನು ಎರಡು ತಿಂಗಳ ಹಿಂದೆ ನಡೆದ 12 ವರ್ಷದ ಬಾಲಕಿಯ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮತ್ತು ಅತ್ಯಾಚಾರ ಘಟನೆಯನ್ನು ವಿಡಿಯೊ ಚಿತ್ರೀಕರಿಸಿದ ಆರೋಪದಲ್ಲಿ ಬಂಧಿಸಲಾಗಿತ್ತು.
ಸಂತ್ರಸ್ತ ಬಾಲಕಿ ಗರ್ಭಿಣಿ ಎಂದು ವೈದ್ಯಕೀಯ ಪರೀಕ್ಷೆಯಿಂದ ತಿಳಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಆರೋಪಿ ಮೊಯಿದ್ ಸಮಾಜವಾದಿ ಪಕ್ಷದ ಸದಸ್ಯ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿಯ ಇತರ ಮುಖಂಡರು ಆಪಾದಿಸಿದ್ದಾರೆ. ಫೈಝಾಬಾದ್ ಸಂಸದ ಅವಧೇಶ್ ಪ್ರಸಾದ್ ಅವರ ತಂಡದಲ್ಲಿ ಆರೋಪಿ ಇದ್ದಾನೆ ಎನ್ನುವುದು ಅವರ ವಾದ.
ಆರೋಪಿ, ಸಂತಸ್ತ ಬಾಲಕಿ ಮತ್ತು ಈ ವಿಚಾರವನ್ನು ರಾಜಕೀಯಗೊಳಿಸಲು ಯತ್ನಿಸುತ್ತಿರುವ ಎಲ್ಲ ಬಿಜೆಪಿ ಮುಖಂಡರಿಗೂ ಮಂಪರು ಪರೀಕ್ಷೆ ನಡೆಯಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ವೃಥಾ ಆರೋಪಗಳನ್ನು ಮಾಡುತ್ತಿದೆ ಎಂದು ಶಿವಪಾಲ್ ಸಿಂಗ್ ಯಾದವ್ ಹೇಳಿದ್ದಾರೆ.