ಆಯುಷ್ಮಾನ್ ಭಾರತ್ | ಪ್ರೀಮಿಯಂ ಯೋಜನೆ ಜಾರಿಯ ಪ್ರಸ್ತಾವ ಇಲ್ಲ
ಆಯುಷ್ಮಾನ್ ಭಾರತ್ | PC : gstsuvidhakendra.org
ಹೊಸದಿಲ್ಲಿ : ಆಯುಷ್ಮಾನ್ ಭಾರತ್ ಯೋಜನೆಯಡಿ 70 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರ ಆರೋಗ್ಯ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಇನ್ನಷ್ಟು ವಿಸ್ತರಿಸಲು ಯಾವುದೇ ತಜ್ಞರ ಸಮಿತಿಯನ್ನು ರಚಿಸಲಾಗಿಲ್ಲವೆಂದು ಕೇಂದ್ರ ಆರೋಗ್ಯ ಖಾತೆಯ ಸಹಾಯಕ ಸಚಿವ ಪ್ರತಾಪ್ರಾವ್ ಜಾಧವ್ ಶುಕ್ರವಾರ ತಿಳಿಸಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರೀಮಿಯಂ ಕಂತುಗಳ ಕೊಡುಗೆಯನ್ನು ಆಧರಿಸಿದ ಸ್ಕೀಂ ಅನ್ನು ಆರಂಭಿಸುವ ಯಾವುದೇ ಪ್ರಸ್ತಾವವು ಇಲ್ಲವೆಂದು ಕೂಡಾ ಅವರು ಸದನಕ್ಕೆ ಮಾಹಿತಿ ನೀಡಿದರು. ಆಯುಷ್ಮಾನ್ ಭಾರತ್ ಯೋಜನೆಯಡಿ 70 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ರಾಷ್ಟ್ರೀಯ ಆರೋಗ್ಯ ಕ್ಲೇಮುಗಳ ವಿನಿಮಯ ಕಾರ್ಯಕ್ರಮವನ್ನು ಆರಂಭಿಸುವ ಪ್ರಸ್ತಾವವಿದೆಯೇ ಹಾಗೂ ಆಯುಷ್ಮಾನ್ ಯೋಜನೆಯ ಸ್ವರೂಪವನ್ನು ಬಲಪಡಿಸಲು ತಜ್ಞರ ಸಮಿತಿ ರಚಿಸಲಾಗುವುದೇ ಎಂಬ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.
ಅರ್ಹ ಕುಟುಂಬಗಳ ಎಲ್ಲಾ ಸದಸ್ಯರು, ವಯಸ್ಸಿನ ಭೇದವಿಲ್ಲದೆ ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆಂದು ಸಚಿವರು ಸದನಕ್ಕೆ ನೀಡಿದ ಲಿಖಿತ ಉತ್ರದಲ್ಲಿ ತಿಳಿಸಿದರು.
ಪ್ರಧಾನಮಂತ್ರಿ-ಆಯುಷ್ಮಾನ್ ಭಾರತ್ಯೋಜನೆಯು ದೇಶದ 12.34 ಕುಟುಂಬಗಳ 55 ಕೋಟಿ ರೂ.ವ್ಯಕ್ತಿಗಳಿಗೆ ಆಸ್ಪತ್ರೆ ದಾಖಲಾತಿ ಹಾಗೂ ಚಿಕಿತ್ಸಾ ವೆಚ್ಚಗಳಿಗೆಂದು ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ಗಳ ಆರೋಗ್ಯ ವಿಮೆಯನ್ನು ಒದಗಿಸುತ್ತದೆ ಎಂದು ಸಚಿವರು ತಿಳಿಸಿದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ಯಾವುದೇ ಫಲಾನುಭವಿಯುವ ದೇಶದಾದ್ಯಂತ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ಹಣ ಪಾವತಿಸದೆಯೇ ಚಿಕಿತ್ಸಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದರು
ಆಸ್ಪತ್ರೆಯಲ್ಲಿ ನಡೆಸಲಾಗುವ ರೋಗ ತಪಾಸಣೆಯ ಫಲಿತಾಂಶದ ಆಧಾರದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಫಲಾನುಭವಿಯು ಬಿಡುಗಡೆಗೊಂಡ ಬಳಿಕ ಆಸ್ಪತ್ರೆಯ ಚಿಕಿತ್ಸಾಶುಲ್ಕಪಾವತಿಗಾಗಿ ಸರಕಾರಕ್ಕೆ ತನ್ನ ಕ್ಲೇಮನ್ನು ಸಲ್ಲಿಸಬಹುದಾಗಿದೆ ಎಂದು ಜಾಧವ್ ತಿಳಿಸಿದರು.
ದಿಲ್ಲಿ ಕೇಂದ್ರಾಡಳಿತ ಪ್ರದೇಶ,ಪಶ್ಚಿಮಬಂಗಾಳ ಹಾಗೂ ಒಡಿಶಾ ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.