ಆಯುಷ್ಮಾನ ಭಾರತ್ ಯೋಜನೆ: 3.42 ಲಕ್ಷ ವಂಚನೆ ಪ್ರಕರಣಗಳು ಪತ್ತೆ, 56,000ಕ್ಕೂ ಅಧಿಕ ಅನಗತ್ಯ ಶಸ್ತ್ರಚಿಕಿತ್ಸೆಗಳು ಬೆಳಕಿಗೆ
PC : freepik
ಹೊಸದಿಲ್ಲಿ: ಕೇಂದ್ರ ಸರಕಾರದ ಮುಂಚೂಣಿಯ ಆರೋಗ್ಯ ವಿಮೆ ಕಾರ್ಯಕ್ರಮವಾಗಿರುವ ಆಯುಷ್ಮಾನ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯಯೋಜನೆ (ಎಬಿ-ಪಿಎಂಜೆಎಐ)ಯಡಿ ಅನಗತ್ಯ ಶಸ್ತ್ರಚಿಕಿತ್ಸೆಗಳು ಸೇರಿದಂತೆ ಸುಮಾರು 3.42 ಲಕ್ಷ ವಂಚನೆ ಪ್ರಕರಣಗಳು ಪತ್ತೆಯಾಗಿವೆ ಎಂದು ಸರಕಾರವು ಶುಕ್ರವಾರ ಸಂಸತ್ತಿನಲ್ಲಿ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಕಾಂಗ್ರೆಸ್ ಸಂಸದ ಮುರಾರಿಲಾಲ ಮೀನಾ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ, 2018ರಲ್ಲಿ ಆರಂಭಗೊಂಡ ಯೋಜನೆಯಡಿ ಡಿ.11ಕ್ಕೆ ಇದ್ದಂತೆ ಒಟ್ಟು 3,42,988 ವಂಚನೆ ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪೈಕಿ 2,86,771 ಪ್ರಕರಣಗಳು ವೈದ್ಯಕೀಯ ನಿರ್ವಹಣೆ ಮತ್ತು 56,217 ಪ್ರಕರಣಗಳು ಶಸ್ತ್ರಚಿಕಿತ್ಸೆ ನಿರ್ವಹಣೆ ವರ್ಗಗಳಲ್ಲಿವೆ ಎಂದು ತಿಳಿಸಿದೆ.
ರಾಜಸ್ಥಾನದ ದೌಸಾ ಸಂಸದ ಮೀನಾ ಅವರು,ಯೋಜನೆಯಡಿ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಅನಗತ್ಯ ಆ್ಯಂಜಿಯೊಪ್ಲಾಸ್ಟಿ ಮತ್ತು ಇತರ ಶಸ್ತ್ರಚಿಕಿತ್ಸೆಗಳಿಂದಾಗಿ ಸಂಭವಿಸುತ್ತಿರುವ ಸಾವುಗಳ ಬಗ್ಗೆ ಸರಕಾರಕ್ಕೆ ಅರಿವಿದೆಯೇ ಎನ್ನುವುದನ್ನು ತಿಳಿಯಲು ಬಯಸಿದ್ದರು.
ಕಳೆದ ತಿಂಗಳು ಅಹ್ಮದಾಬಾದ್ನ ಖ್ಯಾತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯೋಜನೆಯಡಿ ದಾಖಲಾಗಿದ್ದ ಇಬ್ಬರು ‘ರೋಗಿಗಳು’ ಆ್ಯಂಜಿಯೊಪ್ಲಾಸ್ಟಿಯ ಬಳಿಕ ಸಾವನ್ನಪ್ಪಿದ್ದು, ಇವು ಅನಗತ್ಯವಾಗಿದ್ದವು ಎನ್ನುವುದು ನಂತರ ಬೆಳಕಿಗೆ ಬಂದಿತ್ತು.
ಯೋಜನೆಯ ಲೆಕ್ಕ ಪರಿಶೋಧನೆಯ ಬಳಿಕ ಐದು ಖಾಸಗಿ ಆಸ್ಪತ್ರೆಗಳನ್ನು ತಾನು ನಿಷೇಧಿಸಿರುವುದಾಗಿ ಗುಜರಾತ್ ಆರೋಗ್ಯ ಇಲಾಖೆಯು ಈ ವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಇದರೊಂದಿಗೆ 2024ರಲ್ಲಿ ಯೋಜನೆಯಿಂದ ಕೈಬಿಡಲಾಗಿರುವ ಆಸ್ಪತ್ರೆಗಳ ಸಂಖ್ಯೆ 12ಕ್ಕೇರಿದೆ.
ಎಬಿ-ಪಿಎಂಜೆಎವೈ ಯೋಜನೆಯಡಿ ಫಲಾನುಭವಿಗಳು ನೋಂದಾಯಿತ ಆಸ್ಪತ್ರೆಗಳಲ್ಲಿ ಐದು ಲ.ರೂ.ಗಳವರೆಗೆ ನಗದುರಹಿತ ದ್ವಿತೀಯ ಮತ್ತು ತೃತೀಯ ಹಂತದ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಈವರೆಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಸುಮಾರು 12.3 ಕೋಟಿ ಬಡ ಕುಟುಂಬಗಳನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ. ಯೋಜನೆಯನ್ನು ಈಗ ಆದಾಯವನ್ನು ಪರಿಗಣಿಸದೆ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರಿಗೆ ವಿಸ್ತರಿಸಲಾಗಿದೆ.
ಯೋಜನೆಯಡಿ ನ.30ಕ್ಕೆ ಇದ್ದಂತೆ ಒಟ್ಟು 8.39 ಕೋಟಿ ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗಿ 1.16 ಲಕ್ಷ ಕೋಟಿ ರೂ. ಮೌಲ್ಯದ ಚಿಕಿತ್ಸೆಗಳನ್ನು ಪಡೆದಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಸರಕಾರವು ತಿಳಿಸಿದೆ. ಈ ಪೈಕಿ ಶೇ.0.5ಕ್ಕೂ ಕಡಿಮೆ ಪ್ರವೇಶಗಳನ್ನು ವಂಚನೆ ಎಂದು ಗುರುತಿಸಲಾಗಿದೆ.
ಯೋಜನೆಯ ದುರ್ಬಳಕೆಯನ್ನು ಎಳ್ಳಷ್ಟೂ ಸಹಿಸಲಾಗುವುದಿಲ್ಲ ಮತ್ತು ಯೋಜನೆಯ ಅನುಷ್ಠಾನದ ವಿವಿಧ ಹಂತಗಳಲ್ಲಿ ಸಂಭವಿಸಬಹುದಾದ ಹಲವು ಬಗೆಯ ವಂಚನೆಗಳನ್ನು ತಡೆಗಟ್ಟಲು ಮತ್ತು ಪತ್ತೆ ಹಚ್ಚಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸರಕಾರವು ತಿಳಿಸಿದೆ.
ಅಮಾನತು,ಶೋಕಾಸ್ ನೋಟಿಸ್,ಎಚ್ಚರಿಕೆ ಪತ್ರ,ಆಸ್ಪತ್ರೆಗಳ ನೋಂದಣಿ ರದ್ದತಿ,ಇ-ಕಾರ್ಡ್ಗಳ ನಿಷ್ಕ್ರಿಯತೆ,ತಪ್ಪಿತಸ್ಥ ಆಸ್ಪತ್ರೆಗಳಿಗೆ ಭಾರೀ ದಂಡ ಮತ್ತು ಎಫ್ಐಆರ್ ದಾಖಲು ಸೇರಿದಂತೆ ವಂಚಕ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸರಕಾರವು ಉತ್ತರದಲ್ಲಿ ತಿಳಿಸಿದೆ.
ಪ್ರಸ್ತುತ 13,222 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 29,929 ಆಸ್ಪತ್ರೆಗಳು ಆಯುಷ್ಮಾನ ಭಾರತ್ ಯೋಜನೆಯಡಿ ನೋಂದಾವಣೆಗೊಂಡಿವೆ.
ಕೃಪೆ: theprint.in