ಬಾಬಾ ಸಿದ್ದೀಕಿ ಹತ್ಯೆ ಪ್ರಕರಣ | ಬಿಷ್ಣೋಯಿ ಗ್ಯಾಂಗಿನ 7 ಮಂದಿ ಶೂಟರ್ ಗಳ ಬಂಧನ
ಬಾಬಾ ಸಿದ್ದೀಕಿ , ಲಾರೆನ್ಸ್ ಬಿಷ್ಣೋಯಿ | PTI
ಹೊಸದಿಲ್ಲಿ: ಲಾರೆನ್ಸ್ ಬಿಷ್ಣೋಯಿ ಗ್ಯಾಂಗಿನ ಮೇಲೆ ಮುಗಿಬಿದ್ದಿರುವ ದಿಲ್ಲಿ ಪೊಲೀಸ್ ಇಲಾಖೆಯ ವಿಶೇಷ ಘಟಕವು, ರಾಜಸ್ಥಾನದ ವ್ಯಕ್ತಿಯೋರ್ವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ನಡೆಸುತ್ತಿದ್ದ ಏಳು ಮಂದಿ ಶಂಕಿತ ಶೂಟರ್ ಗಳನ್ನು ಬಂಧಿಸಿದ್ದಾರೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 12ರಂದು ಮುಂಬೈನಲ್ಲಿ ಮಾಜಿ ಸಚಿವ ಹಾಗೂ ಎನ್ಸಿಪಿ ನಾಯಕ ಬಾಬಾ ಸಿದ್ದೀಕಿ ಗುಂಡೇಟಿಗೆ ಬಲಿಯಾದ ಕೆಲ ವಾರಗಳ ನಂತರ ಈ ಬಂಧನ ಜರುಗಿದೆ. ಬಾಬಾ ಸಿದ್ದೀಕಿ ಹತ್ಯೆಯ ಹೊಣೆಯನ್ನು ಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡಿತ್ತು.
ಈ ಏಳು ಮಂದಿ ಶಂಕಿತರನ್ನು ಪಂಜಾಬ್ ಹಾಗೂ ಮತ್ತಿತರ ರಾಜ್ಯಗಳಿಂದ ಬಂಧಿಸಲಾಗಿದ್ದು, ಅವರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಶಂಕಿತ ಶೂಟರ್ ಗಳು ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿಯ ನಿಕಟವರ್ತಿಯಾದ ಅರ್ಝೂ ಬಿಷ್ಣೋಯಿ ಸೂಚನೆಯ ಮೇರೆಗೆ ರಾಜಸ್ಥಾನದ ವ್ಯಕ್ತಿಯೋರ್ವರ ಮೇಲೆ ದಾಳಿ ಮಾಡಲು ಯೋಜಿಸಿದ್ದರು ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೊಳಪಡಿಸಲಾಗುವುದು. ಅವರಿಗೆ ಬಾಬಾ ಸಿದ್ದೀಕಿ ಹತ್ಯೆಯಲ್ಲಿ ಇರಬಹುದಾದ ಸಂಪರ್ಕದ ಕುರಿತು ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.