ಬಾಬಾ ಸಿದ್ದೀಕಿ ಹತ್ಯೆ ಪ್ರಕರಣ: ಮೂವರು ಆರೋಪಿಗಳ ವಿರುದ್ಧ ಲುಕೌಟ್ ನೋಟಿಸ್
ಬಾಬಾ ಸಿದ್ದೀಕಿ | PTI
ಮುಂಬೈ: ಎನ್ಸಿಪಿ ನಾಯಕ ಬಾಬಾ ಸಿದ್ದೀಕಿ ಅವರ ಹತ್ಯೆ ಪ್ರಕರಣದ ಕುರಿತಂತೆ ಮುಂಬೈ ಪೊಲೀಸರು ಪ್ರಧಾನ ಶೂಟರ್ ಶಿವಕುಮಾರ್ ಗೌತಮ್ ಸೇರಿದಂತೆ ಮೂವರು ಆರೋಪಿಗಳ ವಿರುದ್ಧ ಲುಕೌಟ್ ನೋಟಿಸ್ ಜಾರಿಗೊಳಿಸಿದ್ದಾರೆ.
ಆರೋಪಿಗಳು ದೇಶದಿಂದ ಪರಾರಿಯಾಗುವುದನ್ನು ತಡೆಯಲು ಮುಂಬೈ ಪೊಲೀಸರು ಈ ಲುಕೌಟ್ ನೋಟಿಸು ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಲುಕೌಟ್ ನೋಟಿಸಿನಲ್ಲಿ ಹೆಸರಿಸಲಾದ ಇನ್ನಿಬ್ಬರು ಆರೋಪಿಗಳೆಂದರೆ, ಸಹ ಪಿತೂರಿಗಾರ ಶುಭಂ ಲೋಂಕರ್ ಹಾಗೂ ಶಂಕಿತ ನಿರ್ವಹಣೆಗಾರ ಮುಹಮ್ಮದ್ ಝೀಶನ್ ಅಖ್ತರ್.
ಆರೋಪಿಗಳನ್ನು ಸೆರೆ ಹಿಡಿಯಲು ದೇಶದ ವಿವಿಧ ಭಾಗಗಳಿಗೆ ಮುಂಬೈ ಪೊಲೀಸ್ನ ಕ್ರೈಮ್ ಬ್ರಾಂಚ್ ಅನ್ನು ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಾಬಾ ಸಿದ್ದೀಕ್ (66)ಅವರನ್ನು ಅವರ ಪುತ್ರ ಝೀಶನ್ ಸಿದ್ದೀಕ್ ಅವರ ಮುಂಬೈಯ ಬಾಂದ್ರಾದಲ್ಲಿರುವ ಕಚೇರಿಯ ಹೊರಗಡೆ ಅಕ್ಟೋಬರ್ 12ರಂದು ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು.
ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಇದುವರೆಗೆ ಹರ್ಯಾಣದ ನಿವಾಸಿ ಗುರ್ಮೈಲ್ ಬಲ್ಜೀತ್ ಸಿಂಗ್ (23), ಉತ್ತರಪ್ರದೇಶದ ನಿವಾಸಿ ಧರ್ಮರಾಜ್ ರಾಜೇಶ್ ಕಶ್ಯಪ್ (19), ಹರೀಶ್ ಕುಮಾರ್ ಬಾಲಕ್ರಮ ನಿಸಾದ್ (23) ಹಾಗೂ ಶುಭಂ ಲೋಂಕರ್ನ ಸಹೋದರ ಪ್ರವೀಣ್ ಲೋಂಕರ್ನನ್ನು ಬಂಧಿಸಿದ್ದಾರೆ.
ಮುಂಬೈ ಪೊಲೀಸರ ತಂಡ ಲೋಂಕರ್ ಸಹೋದರರ ಹೆತ್ತವರು ವಾಸಿಸುತ್ತಿರುವ ಮಹಾರಾಷ್ಟ್ರದ ಅಲೋಕ್ ಜಿಲ್ಲೆಗೆ ಕೂಡ ಭೇಟಿ ನೀಡಲಿದ್ದಾರೆ. ಲೋಕರ್ನ ಬಗ್ಗೆ ಮಾಹಿತಿ ಸಂಗ್ರಹಿಸಲು ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಶುಭಂ ಲೋಂಕರ್ ಎಂದು ಶಂಕಿಸಲಾದ ವ್ಯಕ್ತಿಯೋರ್ವ ಫೇಸ್ಬುಕ್ನಲ್ಲಿ ಲಾರೆನ್ಸ್ ಬಿಷ್ಣೋಯಿಯ ತಂಡ ಬಾಬಾ ಸಿದ್ದೀಕ್ ಅವರನ್ನು ಹತ್ಯೆಗೈದಿದೆ ಎಂದು ಹೇಳಿದ್ದ.