ಬಾಬಾ ಸಿದ್ದೀಕಿ ಹತ್ಯೆ ಪ್ರಕರಣ | ಶೂಟರ್ ಗಳಿಗೆ ಶಸ್ತ್ರಾಸ್ತ್ರ ಒದಗಿಸಿದ ಆರೋಪಿಯ ಬಂಧನ
PC : PTI
ಮಹಾರಾಷ್ಟ್ರ: ಮಾಜಿ ಸಚಿವ, ಎನ್ ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ಅಪರಾಧ ವಿಭಾಗವು ಶೂಟರ್ ಗಳಿಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪಿಯನ್ನು ಬಂಧಿಸಿದ್ದು, ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಬಂಧಿತ ಆರೋಪಿಯನ್ನು ರಾಜಸ್ಥಾನದ ಉದಯಪುರ ಮೂಲದ ಭಗವತ್ ಸಿಂಗ್ ಓಂ ಸಿಂಗ್ (32) ಎಂದು ಗುರುತಿಸಲಾಗಿದ್ದು, ಈತ ನವಿ ಮುಂಬೈನಲ್ಲಿ ನೆಲೆಸಿಕೊಂಡಿದ್ದ. ಭಗವತ್ ಸಿಂಗ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನನ್ನು ಅ. 26ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಅ.12ರಂದು ನಡೆದ ಬಾಬಾ ಸಿದ್ದೀಕಿ ಹತ್ಯೆಗೆ ಸಂಬಂಧಿಸಿದಂತೆ ಭಗವಂತ್ ಸಿಂಗ್ ಸೇರಿದಂತೆ 10 ಆರೋಪಿಗಳನ್ನು ಪೊಲೀಸರು ಇದುವರೆಗೆ ಬಂಧಿಸಿದ್ದಾರೆ. ಸಿದ್ದೀಕಿ ಅವರನ್ನು ಬಾಂದ್ರಾದಲ್ಲಿ ಪುತ್ರ ಜೀಶನ್ ಸಿದ್ದೀಕಿ ಕಚೇರಿ ಬಳಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.
ಶಂಕಿತ ಶೂಟರ್ ಗಳಾದ ಗುರ್ಮೈಲ್ ಬಲ್ಜಿತ್ ಸಿಂಗ್ (23) ಮತ್ತು ಧರ್ಮರಾಜ್ ರಾಜೇಶ್ ಕಶ್ಯಪ್ (19) ಈಗಾಗಲೇ ಪೊಲೀಸರ ವಶದಲ್ಲಿದ್ದಾರೆ. ಪ್ರಮುಖ ಶೂಟರ್ ಶಿವಕುಮಾರ್ ಗೌತಮ್ ಮತ್ತು ಹತ್ಯೆ ಸಂಚಿನಲ್ಲಿ ಭಾಗಿಯಾಗಿರುವ ಇತರ ಇಬ್ಬರು ಆರೋಪಿಗಳು ಕೂಡ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.