ಕೇರಳ: ಬಾವಿಗೆ ಬಿದ್ದ ಮರಿಯಾನೆಯನ್ನು ರಕ್ಷಿಸಿದ ತಾಯಿ ಆನೆ
Photo credit: mathrubhumi.com
ಕೊಚ್ಚಿ: ಬಾವಿಗೆ ಬಿದ್ದ ಮರಿಯಾನೆಯೊಂದನ್ನು ತಾಯಿ ಆನೆ ರಕ್ಷಿಸಿರುವ ಘಟನೆ ಎರ್ನಾಕುಲಂನ ಮಲಯತ್ತೂರ್ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬುಧವಾರ ಬೆಳಗ್ಗೆ ಇಲ್ಲಿತ್ತೋಟ್ ಒಂದನೇ ಬ್ಲಾಕ್ನಲ್ಲಿರುವ ಸಾಜು ಎಂಬವರ ನಿವಾಸದ ಬಾವಿಗೆ ಮರಿಯಾನೆ ಬಿದ್ದಿದೆ. ಆಗ ಆನೆಗಳ ಹಿಂಡು ಘೀಳಿಟ್ಟ ಸದ್ದನ್ನು ಕೇಳಿದ ಸ್ಥಳೀಯರಿಗೆ ಈ ಘಟನೆ ಗಮನಕ್ಕೆ ಬಂದಿದೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ರವಾನಿಸಿದ್ದಾರೆ.
ಸುದ್ದಿ ತಿಳಿದು ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದರಾದರೂ, ಕಾಡಾನೆಗಳ ಹಿಂಡು ಬಾವಿಯ ಬಳಿಯೇ ಬೀಡು ಬಿಟ್ಟಿದ್ದುದರಿಂದ ಅವರು ರಕ್ಷಣಾ ಕಾರ್ಯಾಚರಣೆಗೆ ತೊಡಗಲು ಸಾಧ್ಯವಾಗಿಲ್ಲ. ಹೀಗಾಗಿ ಅರಣ್ಯ ಸಿಬ್ಬಂದಿಗಳು ಆನೆಗಳ ಹಿಂಡನ್ನು ಚದುರಿಸಲು ಮುಂದಾಗಿದ್ದಾರೆ.
ಈ ವೇಳೆ ತಾಯಿ ಆನೆಯು ಬಾವಿಯ ಕಲ್ಲುಗಳನ್ನು ಕೆಡವಿ, ಮರಿಯಾನೆಯು ಬಾವಿಯಿಂದ ಮೇಲೇರಲು ದಾರಿ ಮಾಡಿಕೊಟ್ಟಿದೆ. ಮರಿಯಾನೆಯು ಬಾವಿಯಿಂದ ಮೇಲೇರಿ ಬಂದ ನಂತರ, ಆನೆಯ ಹಿಂಡು ಕಾಡಿನತ್ತ ತೆರಳಿತು ಎಂದು ವರದಿಯಾಗಿದೆ.
ಈ ಪ್ರದೇಶದಲ್ಲಿ ನಿರಂತರವಾಗಿ ಮಾನವ-ವನ್ಯಜೀವಿ ಸಂಘರ್ಷದ ಪ್ರಕರಣಗಳ ವರದಿಯಾಗುತ್ತಲೇ ಇವೆ. ಅರಣ್ಯ ಸಿಬ್ಬಂದಿಗಳ ವಿರುದ್ಧ ಈ ಪ್ರದೇಶದ ನಿವಾಸಿಗಳು ರಸ್ತೆ ತಡೆ ನಡೆಸಿ, ಪ್ರತಿಭಟನೆಗಳನ್ನೂ ಮಾಡುತ್ತಿದ್ದಾರೆ.
ಜನವಸತಿ ಪ್ರದೇಶಗಳನ್ನು ಅತಿಕ್ರಮಿಸುತ್ತಿರುವ ವನ್ಯಜೀವಿಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೂ ಈ ಪ್ರದೇಶದ ನಿವಾಸಿಗಳು ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ.