ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಶಿಶು ಬದಲಾವಣೆ: ಎರಡು ಕುಟುಂಬಗಳ ಆರೋಪ
Photo: freepik
ಮುಂಬೈ: ಮೂರು ತಿಂಗಳ ಹಿಂದೆ ಇಲ್ಲಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಹೆರಿಗೆಯಾಗಿದ್ದ ಸೀಮಾದೇವಿ ಕುಂಬಾರ್ ಮತ್ತು ಸುನೀತಾ ಗಂಗಾಧರ್ ಗಜೇಂಗಿ ತಮ್ಮ ನವಜಾತ ಶಿಶುಗಳನ್ನು ಬೇರೆ ಶಿಶುಗಳ ಜತೆ ಬದಲಾಯಿಸಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಆರೋಪ ಮಾಡಿರುವ ಎರಡೂ ಕುಟುಂಬಗಳು ಕೇವಲ ಆರು ಕಿಲೋಮೀಟರ್ ಅಂತರದ ಪುಟ್ಟ ಮನೆಗಳಲ್ಲಿ ವಾಸಿಸುತ್ತಿರುವವರು.
ಈ ಪೈಕಿ ಒಂದು ಕುಟುಂಬಕ್ಕೆ ಡಿಸೆಂಬರ್ 4ರಂದು ಸತ್ಯ ಬಹಿರಂಗವಾಗುತ್ತದೆ ಎಂಬ ನಿರೀಕ್ಷೆ ಇದೆ. ಸುಧೀರ್ಘ ಹೋರಾಟದ ಬಳಿಕ ತಮ್ಮ ಸ್ವಂತ ಮಗು ಮರಳಿ ಮಡಿಲು ಸೇರುತ್ತದೆ ಎಂಬ ವಿಶ್ವಾಸ ಅವರದ್ದು. ಆಸ್ಪತ್ರೆಯಿಂದ ಹೊರಬರುವ ಸಂದರ್ಭದಲ್ಲಿ ಇದ್ದ ಮಗು ತಮ್ಮ ಸ್ವಂತ ಮಗುವೇ ಎಂಬ ಬಗ್ಗೆ ಸಂದೇಹ ಉಳಿಯಬಾರದು ಎಂಬ ಉದ್ದೇಶದಿಂದ ಈ ಹೋರಾಟಕ್ಕೆ ಕುಟುಂಬ ಮುಂದಾಗಿತ್ತು.
ಪರೇಲ್ ನ ಆಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಕುಂಬಾರ್ ಮಗುವಿಗೆ ಜನ್ಮ ನೀಡಿದ್ದರು. ಈಕೆ ಗಂಡುಮಗುವಿಗೆ ಜನ್ಮ ನೀಡಿದ್ದಾಗಿ ನರ್ಸ್, ಮಹಿಳೆಯ ಭಾವನಿಗೆ ಮಾಹಿತಿ ನೀಡಿದ್ದರು. ಆದರೆ ಅರ್ಧಗಂಟೆ ಬಳಿಕ ಹೆಣ್ಣುಮಗುವನ್ನು ಕೈಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪತಿ ಸುನೀಲ್ ಭೋಯಿವಾಡ ಠಾಣೆಯಲ್ಲಿ ದೂರು ನೀಡಿದ್ದರು ಮತ್ತು ಹೆಣ್ಣು ಮಗುವನ್ನು ಮನೆಗೆ ಒಯ್ಯಲು ನಿರಾಕರಿಸಿದ್ದರು. ತನಿಖೆ ವಿಳಂಬವಾದ ಹಿನ್ನೆಲೆಯಲ್ಲಿ ಮಹಿಳೆಗೆ ತಾನು ಹಾಲುಣಿಸುತ್ತಿರುವ ಮಗು ತನ್ನದು ಎಂಬ ನಂಬಿಕೆ ಇಲ್ಲ. ಈ ಮಗು ನನ್ನದೇ ಎಂಬ ದಾಖಲೆಗಳಿಗೆ ಸಹಿ ಮಾಡುವಂತೆ ವೈದ್ಯರು ಮತ್ತು ನರ್ಸ್ಗಳು ಒತ್ತಡ ತರುತ್ತಿದ್ದಾರೆ ಎಂಬ ಆರೋಪ ಅವರದ್ದು.
ಈ ಹಿನ್ನೆಲೆಯಲ್ಲಿ ಮುಂಬೈ ಹೈಕೋರ್ಟ್ ನವೆಂಬರ್ 3ರಂದು ಮಗುವಿನ ಡಿಎನ್ಎ ಮಾದರಿಯನ್ನು ಕಲೀನಾದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಆದೇಶ ನೀಡಿದೆ. ಜತೆಗೆ ಮಗುವನ್ನು ಮನೆಗೆ ಒಯ್ಯುವಂತೆ ಸಲಹೆ ಮಾಡಿದೆ. ಡಿಸೆಂಬರ್ 4ರಂದು ನ್ಯಾಯಾಧೀಶರು, ಕುಟುಂಬ ಹಾಗೂ ಆಸ್ಪತ್ರೆ ಅಧಿಕಾರಿಗಳ ಸಮ್ಮುಖದಲ್ಲಿ ಎಫ್ಎಸ್ಎಲ್ ವರದಿ ಬಹಿರಂಗಪಡಿಸಲಾಗುತ್ತದೆ.
ಜೂನ್ 7ರಂದು ಜನ್ಮ ನೀಡಿದ ಸುನೀತಾ ಅವರದ್ದೂ ಇದೇ ಸಮಸ್ಯೆ. ಆಕೆ ಪೋಷಿಸುತ್ತಿರುವ ಹೆಣ್ಣುಮಗು ತನ್ನದಲ್ಲ ಎನ್ನುವುದಕ್ಕೆ ಪುರಾವೆ ಇದೆ ಎನ್ನುವುದು ಅವರ ವಾದ. ಸುನೀತಾ ಅವರಿಗೆ 9.34ಕ್ಕೆ ಹೆರಿಗೆಯಾದರೂ ಎರಡು ಗಂಟೆ ವಿಳಂಬವಾಗಿ ಮಗುವನ್ನು ತೋರಿಸಲಾಗಿದೆ. ಮಗು 9 ಪೌಂಡ್ ತೂಕವಿದ್ದು, ಗರ್ಭದಲ್ಲಿರುವಾಗಲೇ ನೀರನ್ನು ಹೀರಿಕೊಂಡ ಹಿನ್ನೆಲೆಯಲ್ಲಿ ಎನ್ಐಸಿಯುಗೆ ಸ್ಥಳಾಂತರಿಸಿ ನಾವು ಒಂಬತ್ತು ದಿನ ಬಳಿಕ ಮಗುವನ್ನು ನೋಡುವುದು ಸಾಧ್ಯವಾಗಿದೆ ಎನ್ನುವುದು ಕುಟುಂಬದ ಆರೋಪ.
ಹದಿನಾರು ವರ್ಷದ ಹೆಣ್ಣುಮಗಳನ್ನು ಹೊಂದಿರುವ ಈ ದಂಪತಿ ಐವಿಎಫ್ ವಿಧಾನದ ಮೂಲಕ ಎರಡನೇ ಮಗು ಪಡೆದಿದ್ದರು. ಮಗು ಚುರುಕಾಗಿದ್ದರೂ, ನಮ್ಮಿಬ್ಬರಂತೆಯೂ ಇಲ್ಲ ಎನ್ನುವುದು ಇವರ ವಾದ. ಆಗಸ್ಟ್ 7ರಂದು ಇವರು ಖಾಸಗಿ ಪ್ರಯೋಗಾಲಯದಲ್ಲಿ ಮಗುವಿನ ಡಿಎನ್ಎಪರೀಕ್ಷೆ ಮಾಡಿಸಿದ್ದು, ಇದರಲ್ಲಿ ವ್ಯತಿರಿಕ್ತ ವರದಿ ಬಂದಿದೆ. ಇವರು ಕೂಡಾ ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಪ್ರಯತ್ನ ಮಾಡಿದರೂ, ಇದನ್ನು ಪೊಲೀಸರು ಸ್ವೀಕರಿಸಿಲ್ಲ. ಸೆಪ್ಟೆಂಬರ್ 27ರಂದು ಮತ್ತೊಂದು ಡಿಎನ್ಎ ಪರೀಕ್ಷೆ ಮಾಡಿಸಿದಾಗಲೂ ಜೈವಿಕವಾಗಿ ಈ ಮಗು ಇವರದ್ದಲ್ಲ ಎಂಬ ವರದಿ ಸಿಕ್ಕಿದೆ.