ಬದ್ಲಾಪುರ ಆರೋಪಿ ಎನ್ಕೌಂಟರ್; ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸದ ಮಹಾರಾಷ್ಟ್ರ ಸರಕಾರಕ್ಕೆ ಹೈಕೋರ್ಟ್ ತರಾಟೆ

ಬಾಂಬೆ ಉಚ್ಚ ನ್ಯಾಯಾಲಯ | PC : PTI
ಮುಂಬೈ: ನ್ಯಾಯಾಲಯದ ಸ್ಪಷ್ಟ ಆದೇಶದ ಹೊರತಾಗಿಯೂ ಬದ್ಲಾಪುರ ಶಾಲಾ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್ ಶಿಂಧೆಯ ಕಸ್ಟಡಿ ಸಾವಿನ ಕುರಿತು ಐವರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸದ ಮಹಾರಾಷ್ಟ್ರ ಸರಕಾರವನ್ನು ಬಾಂಬೆ ಉಚ್ಚ ನ್ಯಾಯಾಲಯ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
ಮೇಲ್ನೋಟಕ್ಕೆ ಅಪರಾಧ ಬಹಿರಂಗವಾದಾಗ ಪೊಲೀಸರು ಪ್ರಕರಣ ದಾಖಲಿಸುವುದು ಕಡ್ಡಾಯವಾಗಿದೆ ಎಂದು ನ್ಯಾಯಾಲಯ ಎಪ್ರಿಲ್ 7ರಂದು ಹೇಳಿತ್ತು.
ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಲಕ್ಷ್ಮೀ ಗೌತಮ್ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡವನ್ನು ನ್ಯಾಯಾಲಯ ರೂಪಿಸಿತ್ತು.
ಶಿಂಧೆಯ ಕಸ್ಟಡಿ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಗೌತಮ್ ಅವರಿಗೆ ಎರಡು ದಿನಗಳ ಒಳಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ನಿರ್ದೇಶಿಸಿತ್ತು.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಹಾಗೂ ನೀಲಾ ಗೋಖಲೆ ಅವರನ್ನು ಒಳಗೊಂಡ ಪೀಠ, ಆದೇಶವನ್ನು ಅನುಸರಿಸದೇ ಇರುವುದು ದಿಗಿಲು ಹುಟ್ಟಿಸಿದೆ ಎಂದು ಶುಕ್ರವಾರ ಹೇಳಿತು.