ಬದ್ಲಾಪುರ್ ಎನ್‌ಕೌಂಟರ್ ಪ್ರಕರಣ | ಮಹಾ ಸರಕಾರದಿಂದ ಏಕಸದಸ್ಯ ತನಿಖಾ ಆಯೋಗ ನೇಮಕ
ಮುಂಬೈ : ಬದ್ಲಾಪುರ್‌ನಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದ ತನಿಖೆಗಾಗಿ ಮಹಾರಾಷ್ಟ್ರ ಸರಕಾರವು ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ದಿಲೀಪ್ ಭೋಸಲೆ ಅವರನ್ನೊಳಗೊಂಡ ಏಕ ಸದಸ್ಯ ಆಯೋಗವನ್ನು ರಚಿಸಿದೆ. ಮೂರು ತಿಂಗಳೊಳಗೆ ವರದಿಯನ್ನು ಸಲ್ಲಿಸುವಂತೆ ಆಯೋಗಕ್ಕೆ ಸೂಚಿಸಿದೆ.
ಬದಲಾಪುರದ ಶಾಲೆಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದ ಆರೋಪಿ ಅಕ್ಷಯ್‌ಶಿಂಧೆಯನ್ನು ಮಹಾರಾಷ್ಟ್ರ ಪೊಲೀಸರು ಸೆಪ್ಟೆಂಬರ್ 23ರಂದು ಥಾಟೆ ಸಮೀಪದ ಮುಂಬ್ರಾ ಬೈಪಾಸ್‌ನಲ್ಲಿ ಎನ್‌ಕೌಂಟರ್ ನಡೆಸಿ ಹತ್ಯೆಗೈದಿದ್ದಾರೆನ್ನಲಾಗಿದೆ.
ಆರೋಪಿ ಅಕ್ಷಯ್ ಶಿಂಧೆಯನ್ನು ಪೊಲೀಸರು ಕೊಂಡೊಯ್ಯುತ್ತಿದ್ದಾಗ, ಆತ ಬಂದೂಕನ್ನು ಕಸಿದುಕೊಂಡು ಪೊಲೀಸರಿಗೆ ಗುಂಡಿಕ್ಕಿದ್ದು, ಘಟನೆಯಲ್ಲಿ ಓರ್ವ ಪೊಲೀಸ್‌ಗಾಯಗೊಂಡಿದ್ದರು. ಆಗ ಪೊಲೀಸರು ಆತನ ಎನ್‌ಕೌಂಟರ್ ನಡೆಸಿದ್ದರೆನ್ನಲಾಗಿದೆ. ಗಂಭೀರ ಗಾಯಗೊಂಡ ಶಿಂಧೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಗ ಆತಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.
ಇಂತಹ ಘಟನೆಗಳು ಮರುಕಳಿಸುವುದನ್ನು ತಪ್ಪಿಸಲು ದೀರ್ಘಾವಧಿಯ ಹಾಗೂ ಅಲ್ಪಾವಧಿಯ ಕ್ರಮಗಳನ್ನು ಶಿಫಾರಸು ಮಾಡುವಂತೆಯೂ ಆಯೋಗಕ್ಕೆ ಸೂಚಿಸಲಾಗಿದೆ.