ರೈಲಿನಲ್ಲಿ ಬ್ಯಾಗ್ ಕಳ್ಳತನ: ಪ್ರಯಾಣಿಕನಿಗೆ ರೂ. 4.7 ಲಕ್ಷ ಪಾವತಿಸುವಂತೆ ರೈಲ್ವೆಗೆ ನ್ಯಾಯಾಲಯ ಆದೇಶ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಮೇ 2017ರಲ್ಲಿ ಪ್ರಯಾಣಿಕರೊಬ್ಬರಿಗೆ ಸೇರಿದ್ದ ವಸ್ತುಗಳು ಕಳುವಾಗಿದ್ದ ಪ್ರಕರಣದಲ್ಲಿ ಸದರಿ ಪ್ರಯಾಣಿಕರಿಗೆ ರೂ. 4.7 ಲಕ್ಷ ಪರಿಹಾರ ಪಾವತಿಸುವಂತೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಭಾರತೀಯ ರೈಲ್ವೆಗೆ ಆದೇಶಿಸಿದೆ.
ದಿಲೀಪ್ ಚತುರ್ವೇದಿ ಎಂಬ ಪ್ರಯಾಣಿಕರು ತಮ್ಮ ವಸ್ತುಗಳನ್ನು ಸುರಕ್ಷಿತವಾಗಿಡಲು ಎಲ್ಲ ಸಕಾರಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರೂ, ಪ್ರಯಾಣ ಟಿಕೆಟ್ ಪರೀಕ್ಷಕರು ಹೊರಗಿನವರು ಮೀಸಲು ಬೋಗಿ ಪ್ರವೇಶಿಸುವುದನ್ನು ತಡೆಯಲು ವಿಫಲವಾಗಿದ್ದರಿಂದ ಈ ದಂಡ ವಿಧಿಸಲಾಗಿದೆ.
ರೈಲ್ವೆ ಕಾಯ್ದೆಯ ಸೆಕ್ಷನ್ 100ರ ಅಡಿ ಪ್ರಯಾಣಿಕರ ಯಾವುದೇ ವಸ್ತುವನ್ನು ಕಾಯ್ದಿರಿಸಲಾಗಿರದಿದ್ದರೆ ಹಾಗೂ ಅದಕ್ಕೆ ರಶೀದಿಯನ್ನು ನೀಡಿರದಿದ್ದರೆ, ಅಂತಹ ವಸ್ತುಗಳ ನಷ್ಟ, ಹಾನಿ ಅಥವಾ ಕೊಳೆಯುವಿಕೆಗೆ ರೈಲ್ವೆ ಇಲಾಖೆ ಜವಾಬ್ದಾರವಲ್ಲ ಎಂಬ ಭಾರತೀಯ ರೈಲ್ವೆಯ ವಾದವನ್ನು ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತಳ್ಳಿ ಹಾಕಿತು ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರಯಾಣಿಕರಿಗೆ ಮಾನಸಿಕ ಕ್ಷೋಭೆಯನ್ನುಂಟು ಮಾಡಿದ್ದಕ್ಕಾಗಿ ನ್ಯಾಯಪೀಠವು ಭಾರತೀಯ ರೈಲ್ವೆಗೆ ರೂ. 20,000 ದಂಡವನ್ನು ವಿಧಿಸಿದೆ. “ರೈಲ್ವೆಯು ಪ್ರಯಾಣಿಕರ ವಸ್ತುಗಳ ಕಳವಿಗೆ ಜವಾಬ್ದಾರವಾಗಿದ್ದು, ಪ್ರಯಾಣಿಕರ ಸೇವೆಯಲ್ಲಿ ಕೊರತೆಯಾಗಿದೆ. ಇದು ಸಂಬಂಧಿತ ರೈಲ್ವೆ ಅಧಿಕಾರಿಯ ನಿರ್ಲಕ್ಷ್ಯದಿಂದಾಗಿದೆ” ಎಂದು ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ನೀಡಿದೆ.
ಈ ಘಟನೆಯು ಚತುರ್ವೇದಿ ಹಾಗೂ ಹಾಗೂ ಅವರ ಕುಟುಂಬದ ಸದಸ್ಯರು ಸ್ಲೀಪರ್ ದರ್ಜೆಯ ಬೋಗಿಯಲ್ಲಿ ಮೇ 9, 2017ರಂದು ಕತ್ನಿಯಿಂದ ದುರ್ಗ್ ಗೆ ಪ್ರಯಾಣಿಸುವಾಗ ನಡೆದಿತ್ತು ಎನ್ನಲಾಗಿದೆ.