ಬಹ್ರೈಚ್ ಹಿಂಸಾಚಾರ: ಅ.23ರವರೆಗೆ ತೆರವು ಕಾರ್ಯಾಚರಣೆ ನಡೆಸುವುದಿಲ್ಲ: ಸುಪ್ರೀಂ ಕೋರ್ಟ್ ಗೆ ತಿಳಿಸಿದ ಯುಪಿ ಸರಕಾರ
PC : PTI
ಹೊಸದಿಲ್ಲಿ: ಬಹ್ರೈಚ್ ಹಿಂಸಾಚಾರ ಪ್ರಕರಣದ ಆರೋಪಿಗಳ ಒಡೆತನದ ಕಟ್ಟಡಗಳನ್ನು ತೆರವುಗೊಳಿಸುವ ಕುರಿತ ನೊಟೀಸ್ ಗೆ ಸಂಬಂಧಿಸಿ ಅ.23ರ ಬುಧವಾರದವರೆಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಉತ್ತರಪ್ರದೇಶ ಸರಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ.
ಬಹ್ರೈಚ್ ಹಿಂಸಾಚಾರ ಪ್ರಕರಣದ ಮೂವರು ಆರೋಪಿಗಳು ಸಲ್ಲಿಸಿದ ಅರ್ಜಿಯನ್ನು ಅ. 23ರಂದು ಆಲಿಸಲು ಸುಪ್ರೀಂ ಕೋರ್ಟ್ ಸಮ್ಮತಿಯನ್ನು ನೀಡಿದೆ.
ಪ್ರಕರಣದ ತುರ್ತು ವಿಚಾರಣೆ ಕೋರಿ ಹಿರಿಯ ವಕೀಲ ಚಂದರ್ ಉದಯ್ ಸಿಂಗ್ ಸಲ್ಲಿಸಿದ್ದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ರಾಜ್ಯ ಸರ್ಕಾರ ನೊಟೀಸ್ ಗೆ ಪ್ರತಿಕ್ರಿಯಿಸಲು ಕೇವಲ ಮೂರು ದಿನಗಳ ಕಾಲಾವಕಾಶ ನೀಡಿದೆ ಎಂದು ಸಿಂಗ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಅವರ ಪೀಠದ ಗಮನಕ್ಕೆ ತಂದಿದ್ದರು.
ಈ ವೇಳೆ ಯುಪಿ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಬುಧವಾರದವರೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಬಹ್ರೈಚ್ ನ ಮಹಾರಾಜಗಂಜ್ ನಲ್ಲಿ ದುರ್ಗಾ ಮೂರ್ತಿಯ ಮೆರವಣಿಗೆ ಸಂದರ್ಭ ಕೋಮು ಹಿಂಸಾಚಾರ ನಡೆದಿತ್ತು. ಈ ಘಟನೆ ಬಳಿಕ ಸ್ಥಳೀಯ ಆಡಳಿತ ಈ ಪ್ರದೇಶದಲ್ಲಿ ಸರಕಾರಿ ಭೂಮಿ ಅತಿಕ್ರಮಿಸಿಕೊಂಡು ನಿರ್ಮಿಸಿರುವ ಮನೆ, ಅಂಗಡಿಗಳ ತೆರವಿಗೆ ನೊಟೀಸ್ ನೀಡಿತ್ತು.