ಯುಎಪಿಎಯಂತಹ ವಿಶೇಷ ಕಾನೂನುಗಳಡಿ ಕೂಡಾ ಅಪರಾಧಗಳಿಗೆ ಜಾಮೀನು ನೀಡಿಕೆ ನಿಯಮವಾಗಿದೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ‘ಜಾಮೀನು ನಿಯಮ, ಜೈಲು ಅಪವಾದ’ ಎಂಬ ಕಾನೂನು ತತ್ವವು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ(ಯುಎಪಿಎ)ಯಂತಹ ವಿಶೇಷ ಕಾನೂನುಗಳಡಿ ಅಪರಾಧಗಳಿಗೂ ಅನ್ವಯಿಸುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹೇಳಿದೆ. ಯುಎಪಿಎ ಅಡಿ ಆರೋಪಿಗೆ ಜಾಮೀನು ಮಂಜೂರು ಮಾಡಿದ ಸಂದರ್ಭದಲ್ಲಿ ನ್ಯಾಯಾಲಯದ ಈ ಅವಲೋಕನವು ಹೊರಬಿದ್ದಿದೆ.
ನ್ಯಾಯಾಲಯವು ಅರ್ಹ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಲು ಆರಂಭಿಸಿದರೆ ಅದು ಸಂವಿಧಾನದ ವಿಧಿ ೨೧ರಡಿ ಖಾತರಿಪಡಿಸಲಾಗಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಅಭಯ ಎಸ್.ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ಹೇಳಿತು.
ಪ್ರಾಸಿಕ್ಯೂಷನ್ ಆರೋಪಗಳು ಅತ್ಯಂತ ಗಂಭೀರವಾಗಿರಬಹುದು,ಆದರೆ ಕಾನೂನಿಗೆ ಅನುಗುಣವಾಗಿ ಜಾಮೀನಿಗೆ ಪ್ರಕರಣವನ್ನು ಪರಿಗಣಿಸುವುದು ನ್ಯಾಯಾಲಯಗಳ ಕರ್ತವ್ಯವಾಗಿದೆ. ಜಾಮೀನು ನಿಯಮ ಜೈಲು ಅಪವಾದ ಎನ್ನುವುದು ವಿಶೇಷ ಕಾನೂನುಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು ಆರೋಪಿ ಜಲಾಲುದ್ದೀನ್ ಖಾನ್ನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿತು.
ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ಸದಸ್ಯರಿಗೆ ತನ್ನ ಮನೆಯ ಮಹಡಿಯನ್ನು ಬಾಡಿಗೆಗೆ ನೀಡಿದ್ದಕ್ಕಾಗಿ ಖಾನ್ ವಿರುದ್ಧ ಯುಎಪಿಎ ಮತ್ತು ಈಗ ನಿಷ್ಕ್ರಿಯಗೊಂಡಿರುವ ಐಪಿಸಿಯಡಿ ಪ್ರಕರಣ ದಾಖಲಾಗಿತ್ತು.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಪ್ರಕಾರ, ಭೀತಿಯ ವಾತಾವರಣವನ್ನು ಸೃಷ್ಟಿಸಲು ಹಾಗೂ ದೇಶದ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡಲು ಭಯೋತ್ಪಾದನೆ ಮತ್ತು ಹಿಂಸಾಕೃತ್ಯಗಳನ್ನು ನಡೆಸಲು ಕ್ರಿಮಿನಲ್ ಸಂಚನ್ನು ರೂಪಿಸಲಾಗಿತ್ತು.
ಸಂಚಿನ ಮುಂದಿನ ಭಾಗವಾಗಿ ಆರೋಪಿಯು ಪಾಟ್ನಾದ ಫುಲ್ವಾರಿಶರೀಫ್ನ ಅಹ್ಮದ್ ಪ್ಯಾಲೇಸ್ನಲ್ಲಿ ಬಾಡಿಗೆ ವಸತಿಯನ್ನು ವ್ಯವಸ್ಥೆ ಮಾಡಿದ್ದ ಮತ್ತು ಹಿಂಸಾಕೃತ್ಯಗಳನ್ನೆಸಗಲು ತರಬೇತಿಗಾಗಿ ಹಾಗೂ ಕ್ರಿಮಿನಲ್ ಸಂಚಿನ ಸಭೆಗಳನ್ನು ನಡೆಸಲು ಅದರ ಆವರಣವನ್ನು ಬಳಸಿಕೊಂಡಿದ್ದ ಎಂದೂ ಎನ್ಐಎ ಆರೋಪಿಸಿದೆ.
2022ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಸ್ತಾವಿತ ಭೇಟಿ ಸಂದರ್ಭದಲ್ಲಿ ಗೊಂದಲವನ್ನು ಸೃಷ್ಟಿಸಲು ಆರೋಪಿಗಳ ಸಂಚಿನ ಕುರಿತು ಬಿಹಾರ ಪೋಲಿಸರಿಗೆ ಮಾಹಿತಿ ಲಭಿಸಿತ್ತು ಮತ್ತು 2022,ಜು.11ರಂದು ಫುಲ್ವಾರಿಶರೀಫ್ ಪೋಲಿಸರು ಖಾನ್ ಮನೆಯ ಮೇಲೆ ದಾಳಿ ನಡೆಸಿದ್ದರು.