ಟ್ರಯಲ್ ನಿಂದ ವಿನಾಯತಿ ಪಡೆಯುವ ಮೂಲಕ ವಿನೇಶ್ ಮತ್ತು ಬಜರಂಗ್ ನಮ್ಮ ಪ್ರತಿಭಟನೆಯ ವರ್ಚಸ್ಸಿಗೆ ಧಕ್ಕೆ ತಂದರು : ಸಾಕ್ಷಿ ಮಲಿಕ್
ಬಾಲಕಿಯಾಗಿದ್ದಾಗ ನನ್ನ ಮೇಲೂ ದೌರ್ಜನ್ಯ ನಡೆದಿತ್ತು ಎಂದ ಮಾಜಿ ಕುಸ್ತಿ ಪಟು
PC : PTI
ಹೊಸದಿಲ್ಲಿ: ಕಳೆದ ವರ್ಷ ನಡೆದ ಏಶ್ಯನ್ ಗೇಮ್ಸ್ ಟ್ರಯಲ್ ನಿಂದ ವಿನೇಶ್ ಫೋಗಟ್ ಹಾಗೂ ಬಜರಂಗ್ ಪೂನಿಯಾ ವಿನಾಯತಿಯನ್ನು ಪಡೆಯುವ ಮೂಲಕ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ನಾವು ನಡೆಸುತ್ತಿದ್ದ ಪ್ರತಿಭಟನೆಯ ವರ್ಚಸ್ಸಿಗೆ ಧಕ್ಕೆ ತಂದರು ಎಂದು ಒಲಿಂಪಿಕ್ ಕಂಚಿನ ಪದಕ ವಿಜೇತೆ ಹಾಗೂ ಮಾಜಿ ಕುಸ್ತಿಪಟು ಸಾಕ್ಷಿ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆದ ಸುದೀರ್ಘ ಕಾಲದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮೂವರು ಪ್ರಖ್ಯಾತ ವ್ಯಕ್ತಿಗಳ ಪೈಕಿ ಒಬ್ಬರಾಗಿದ್ದ ಸಾಕ್ಷಿ ಮಲಿಕ್, ಇತ್ತೀಚೆಗೆ ಬಿಡುಗಡೆಯಾಗಿರುವ ತಮ್ಮ ಕೃತಿ ‘ವಿಟ್ನೆಸ್’ನಲ್ಲಿ ಮೇಲಿನಂತೆ ಆರೋಪಿಸಿದ್ದಾರೆ.
ವಿನೇಶ್ ಫೋಗಟ್ ಹಾಗೂ ಬಜರಂಗ್ ಪೂನಿಯಾರೊಂದಿಗಿದ್ದ ಜನರು, ಅವರ ತಲೆಯಲ್ಲಿ ದುರಾಸೆಯನ್ನು ತುಂಬಿದ್ದರಿಂದ, ನಮ್ಮ ಪ್ರತಿಭಟನೆಯಲ್ಲಿ ಬಿರುಕು ಮೂಡಿತು ಎಂದೂ ಅವರು ದೂರಿದ್ದಾರೆ.
ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಈ ಮೂವರು ಕುಸ್ತಿಪಟುಗಳು ಆರೋಪಿಸಿದ್ದರು. ಸದ್ಯ ಈ ಪ್ರಕರಣದ ವಿಚಾರಣೆಯನ್ನು ದಿಲ್ಲಿ ನ್ಯಾಯಾಲಯವೊಂದು ನಡೆಸುತ್ತಿದೆ.
ಭಾರತೀಯ ಕುಸ್ತಿ ಒಕ್ಕೂಟವನ್ನು ಅಮಾನತುಗೊಳಿಸಿ, ಅಧಿಕಾರವನ್ನು ವಹಿಸಿಕೊಂಡಿದ್ದ ತಾತ್ಕಾಲಿಕ ಸಮಿತಿಯು, 2023ರ ಏಶ್ಯನ್ ಗೇಮ್ಸ್ ಟ್ರಯಲ್ಸ್ ನಿಂದ ವಿನೇಶ್ ಫೋಗಟ್ ಹಾಗೂ ಬಜರಂಗ್ ಪೂನಿಯಾ ಗೆ ವಿನಾಯತಿ ನೀಡಿತ್ತು. ಆದರೆ, ಸಾಕ್ಷಿ ಮಲ್ಲಿಕ್ ಯಾವುದೇ ನೆರವು ಪಡೆಯದಿರಲು ನಿರ್ಧರಿಸಿದ್ದರು.
ಇದರ ಬೆನ್ನಿಗೇ ಸಾಕ್ಷಿ ಮಲಿಕ್ ಏಶ್ಯನ್ ಗೇಮ್ಸ್ ನಿಂದ ಹೊರಗುಳಿದಿದ್ದರು. ಆದರೆ, ಕ್ರೀಡಾಕೂಟ ಪ್ರಾರಂಭವಾಗುವುದಕ್ಕೂ ಮುನ್ನವೇ ವಿನೇಶ್ ಫೋಗಟ್ ಗಾಯಾಳುವಾದರೆ, ಹ್ಯಾಂಗ್ ಝೌನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಬಜರಂಗ್ ಪೂನಿಯಾ ಪದಕ ಜಯಿಸುವಲ್ಲಿ ವಿಫಲರಾಗಿದ್ದರು.
“ಸ್ವಾರ್ಥದಿಂದ ಯೋಚಿಸುವ ಹಳೆಯ ಶೈಲಿ ಮತ್ತೊಮ್ಮೆ ಎಲ್ಲವನ್ನೂ ಹಾಳುಗೆಡವಿತು. ವಿನೇಶ್ ಮತ್ತು ಬಜರಂಗ್ ಗೆ ಹತ್ತಿರವಿದ್ದವರು ಅವರ ಮನಸ್ಸಿನಲ್ಲಿ ದುರಾಸೆ ತುಂಬಲು ಪ್ರಾರಂಭಿಸಿದರು. ನಂತರ, ಅವರು ಏಶ್ಯನ್ ಗೇಮ್ಸ್ ಟ್ರಯಲ್ಸ್ ನಿಂದ ವಿನಾಯತಿ ನೀಡಬೇಕು ಎನ್ನುವ ಕುರಿತು ಮಾತನಾಡತೊಡಗಿದರು,”ಎಂದು ಪತ್ರಕರ್ತ ಜೋನಾಥನ್ ಸೆಲ್ವರಾಜ್ ಅವರು ಸಹ ಲೇಖಕರಾಗಿರುವ ತಮ್ಮ ಕೃತಿಯಲ್ಲಿ ಸಾಕ್ಷಿ ಮಲಿಕ್ ದಾಖಲಿಸಿದ್ದಾರೆ. ಆದರೆ, ಅವರಿಬ್ಬರನ್ನು ಪ್ರಭಾವಿಸಿದ ವ್ಯಕ್ತಿಗಳ ಹೆಸರನ್ನು ಸಾಕ್ಷಿ ಮಲಿಕ್ ಬಹಿರಂಗಪಡಿಸಿಲ್ಲ.
“ವಿನಾಯತಿ ಪಡೆಯುವ ವಿನೇಶ್ ಮತ್ತು ಬಜರಂಗ್ ನಿರ್ಧಾರದಿಂದ ಏನೂ ಒಳಿತಾಗಲಿಲ್ಲ. ಅವರ ಆ ನಿರ್ಧಾರದಿಂದ ಪ್ರತಿಭಟನೆಯ ವರ್ಚಸ್ಸಿಗೆ ಭಾರಿ ಧಕ್ಕೆಯಾಯಿತು. ಅದರಿಂದಾಗಿ ನಮ್ಮ ಬೆಂಬಲಕ್ಕೆ ನಿಂತಿದ್ದ ಹಲವರಲ್ಲಿ ನಾವು ವಾಸ್ತವವಾಗಿ ನಮ್ಮ ಸ್ವಾರ್ಥಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂಬ ಭಾವನೆ ಮೂಡುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿತು,” ಎಂದು 32 ವರ್ಷದ ಮಾಜಿ ಕುಸ್ತಿಪಟು ಸಾಕ್ಷಿ ಮಲಿಕ್ ಹೇಳಿದ್ದಾರೆ.
ಮಾಜಿ ಕುಸ್ತಿಪಟು ಹಾಗೂ ಹಾಲಿ ಬಿಜೆಪಿ ರಾಜಕಾರಣಿಯಾದ ಬಬಿತಾ ಫೋಗಟ್ ವಿರುದ್ಧವೂ ಆರೋಪಿಸಿರುವ ಸಾಕ್ಷಿ ಮಲಿಕ್, ಪ್ರತಿಭಟನೆಯಲ್ಲಿ ತೊಡಗಿದ್ದ ನಮ್ಮ ಮೂವರ ಹಿತೈಷಿಯಂತೆ ಅವರು ತೋರಿಸಿಕೊಂಡರೂ, ಅವರಿಗೆ ಅವರದೇ ಆದ ಸ್ವಾರ್ಥ ಉದ್ದೇಶವಿತ್ತು ಎಂದು ಹೇಳಿದ್ದಾರೆ.
“ಹಿಂದಿರುಗಿ ನೋಡಿದಾಗ, ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಅಧಿಕಾರವನ್ನು ಕೊನೆಗೊಳಿಸುವುದು ವಿನೇಶ್ ಮತ್ತು ಬಜರಂಗ್ ರ ಗುರಿಯಾಗಿತ್ತು ಎಂಬುದು ನನಗೆ ತಿಳಿದಿದೆ. ಆದರೆ, ಬಬಿತಾರ ಮುಖ್ಯ ಉದ್ದೇಶ ಕೂಡಾ ಅದೇ ಎಂದು ಯೋಚಿಸಿ ನಾನು ತಪ್ಪು ಮಾಡಿದೆ. ಆಕೆಗೆ ಕೇವಲ ಬ್ರಿಜ್ ಭೂಷಣ್ ಶರಣ್ ಸಿಂಗ್ ರನ್ನು ಹುದ್ದೆಯಿಂದ ಕಿತ್ತೆಸೆಯುವುದು ಮಾತ್ರ ಬೇಕಿರಲಿಲ್ಲ; ಅವರ ಬದಲಿಗೆ ತಾನು ಆ ಹುದ್ದೆಯಲ್ಲಿ ಕೂರುವುದೂ ಬೇಕಿತ್ತು,” ಎಂದೂ ಅವರು ಆರೋಪಿಸಿದ್ದಾರೆ.
ನನ್ನ ಪ್ರಶಸ್ತಿಯ ಬಹುತೇಕ ಹಣವನ್ನು ನನ್ನ ಪೋಷಕರೇ ತೆಗೆದುಕೊಂಡು ಹೋದರು ಎಂದೂ ಅವರು ತಮ್ಮ ಕೃತಿಯಲ್ಲಿ ಸಾಕ್ಷಿ ಉಲ್ಲೇಖಿಸಿದ್ದಾರೆ. ನನ್ನ ಕುಟುಂಬವು ನಾನು ನನ್ನ ಸಹ ಕುಸ್ತಿಪಟು ಸತ್ಯವರ್ತ್ ಕದಿಯನ್ ರನ್ನು ವರಿಸುವುದರ ವಿರುದ್ಧವಿತ್ತು. ಆದರೆ, ನಾನು ನಮ್ಮ ಸಂಬಂಧದ ಬಗ್ಗೆ ದೃಢ ನಿರ್ಧಾರ ಕೈಗೊಂಡೆ ಎಂದೂ ಅವರು ಹೇಳಿಕೊಂಡಿದ್ದಾರೆ.
►ಬಾಲಕಿಯಾಗಿದ್ದಾಗ ನನ್ನ ಮೇಲೂ ದೌರ್ಜನ್ಯ:
ಬಾಲಕಿಯಾಗಿದ್ದಾಗ ನನ್ನ ಮೇಲೂ ದೌರ್ಜನ್ಯವಾಗಿತ್ತು. ನಾನು ಟ್ಯೂಷನ್ ಗೆ ಹೋಗುತ್ತಿದ್ದಾಗ ಟ್ಯೂಷನ್ ಶಿಕ್ಷಕಕರು ನನ್ನನ್ನು ತನ್ನ ಬಳಿ ಕರೆಯುತ್ತಿದ್ದರು. ಮುಟ್ಟಲು ಪ್ರಯತ್ನಿಸುತ್ತಿದ್ದರು. ಆದರೆ ಇದನ್ನು ಮನೆಯಲ್ಲಿ ಹೇಳಲು ಸಾಧ್ಯವಾಗಲಿಲ್ಲ. ನನಗೆ ಭಯವಾಗುತ್ತಿತ್ತು ಎಂದು ಅವರು ತಮ್ಮ ಮೇಲಾಗಿದ್ದ ದೌರ್ಜನ್ಯದ ಬಗ್ಗೆ ಕೃತಿಯಲ್ಲಿ ಹೇಳಿಕೊಂಡಿದ್ದಾರೆ.