ಬಾಲಾಸೋರ್ ರೈಲು ದುರಂತ: 50ಕ್ಕೂ ಅಧಿಕ ಶವಗಳ ಗುರುತು ಇನ್ನೂ ಪತ್ತೆಯಾಗಿಲ್ಲ
Photo: PTI
ಭುವನೇಶ್ವರ: ಒಡಿಶಾದ ಬಾಲಾಸೋರ್ ತ್ರಿವಳಿ ರೈಲು ಅಪಘಾತದಲ್ಲಿ ಮೃತಪಟ್ಟವರ ಪೈಕಿ 50ಕ್ಕೂ ಅಧಿಕ ಜನರ ಶವಗಳು ಈಗಲೂ ಏಮ್ಸ್ ಭುವನೇಶ್ವರದಲ್ಲಿ ಗುರುತು ಪತ್ತೆಗಾಗಿ ಕಾಯುತ್ತಿವೆ. ಈ ನಡುವೆ ಭುವನೇಶ್ವರ ಮಹಾನಗರ ಪಾಲಿಕೆಯು ಇಲ್ಲಿಯ ಸತ್ಯನಗರ ಚಿತಾಗಾರದಲ್ಲಿ ಇಬ್ಬರು ಬಲಿಪಶುಗಳ ಅಂತ್ಯಸಂಸ್ಕಾರ ನಡೆಸಿದೆ.
ಏಮ್ಸ್ ಭುವನೇಶ್ವರದಲ್ಲಿ ಇರಿಸಲಾಗಿದ್ದ 81 ಶವಗಳ ಪೈಕಿ 29 ಶವಗಳನ್ನು ಡಿಎನ್ಎ ಪರೀಕ್ಷೆಯ ಮೂಲಕ ಗುರುತಿಸಲಾಗಿದ್ದು, ಇವುಗಳಲ್ಲಿ ಎರಡು ಶವಗಳ ಅಂತ್ಯಸಂಸ್ಕಾರವನ್ನು ರವಿವಾರ ನಡೆಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.
ಪ್ರಸ್ತುತ ಏಮ್ಸ್ ಭುವನೇಶ್ವರದಲ್ಲಿ 52 ಶವಗಳು ಗುರುತು ಪತ್ತೆಗಾಗಿ ಕಾಯುತ್ತಿವೆ ಎಂದರು.
ಜೂ.2ರಂದು ಬಾಲಾಸೋರ್ ಬಹನಾಗಾ ಬಝಾರ್ ರೈಲು ನಿಲ್ದಾಣದ ಸಮೀಪ ಶಾಲಿಮಾರ-ಚೆನ್ನೈ ಕೋರಮಂಡಲ ಎಕ್ಸ್ಪ್ರೆಸ್, ಬೆಂಗಳೂರು-ಹೌರಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಮತ್ತು ಸರಕು ಸಾಗಣೆ ರೈಲಿನ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ 293 ಜನರು ಮೃತಪಟ್ಟಿದ್ದರು.
ಮೂವರ ಶವಗಳನ್ನು ಅವರ ತವರೂರಿಗೆ ಕಳುಹಿಸಲು ಏಮ್ಸ್ ಭುವನೇಶ್ವರ ವ್ಯವಸ್ಥೆಗಳನ್ನು ಮಾಡಿತ್ತು, ಒಂದು ಶವವನ್ನು ಮೃತನ ಸಂಬಂಧಿಗಳು ಬಿಹಾರದಲ್ಲಿಯ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದರು. ಜಾರ್ಖಂಡ್ ನ ದಿನೇಶ್ ಯಾದವ್ (31) ಮತ್ತು ಬಿಹಾರದ ಸುರೇಶ್ ರೇ (23) ಅವರ ಸಂಬಂಧಿಗಳು ದೂರ ಪ್ರಯಾಣವನ್ನು ಪರಿಗಣಿಸಿ ಮೃತದೇಹಗಳನ್ನು ಊರಿಗೆ ಒಯ್ಯಲು ಬಯಸಿರಲಿಲ್ಲ. ಈ ಕುಟುಂಬಗಳ ಅನುಮತಿಯ ಮೇರೆಗೆ ಮಹಾನಗರ ಪಾಲಿಕೆಯೇ ಅವುಗಳ ಅಂತ್ಯಸಂಸ್ಕಾರ ನಡೆಸಿತು ಎಂದು ಬಿಎಂಸಿಯ ಹಿರಿಯ ಅಧಿಕಾರಿಗಳು ತಿಳಿಸಿದರು.
ಬಾಕಿಯುಳಿದಿರುವ 52 ಶವಗಳ ಡಿಎನ್ಎ ಸ್ಯಾಂಪಲ್ ಗಳ ಪರೀಕ್ಷಾ ಫಲಿತಾಂಶ 2-3 ದಿನಗಳಲ್ಲಿ ಕೈಸೇರುವ ನಿರೀಕ್ಷೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದರು.