ರಾಜಕೀಯ ಪೋಸ್ಟ್, ರೀಲ್ಸ್ಗಳಿಗೆ ನಿಷೇಧ: ದಿಲ್ಲಿ ಪೊಲೀಸರಿಗೆ ಸಾಮಾಜಿಕ ಜಾಲತಾಣ ಬಳಕೆಗೆ ಮಾರ್ಗಸೂಚಿ
ಸಾಂದರ್ಭಿಕ ಚಿತ್ರ.| Photo: PTI
ಹೊಸದಿಲ್ಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಹೇಗೆ ವರ್ತಿಸಬೇಕು ಎಂಬುದರ ಕುರಿತಂತೆ ದಿಲ್ಲಿ ಪೊಲೀಸರಿಗೆ ʼನೂತನ ಸಾಮಾಜಿಕ ಮಾಧ್ಯಮ ಮಾರ್ಗಸೂಚಿಗಳನ್ನುʼ ಹೊರಡಿಸಲಾಗಿದ್ದು, ಸಮವಸ್ತ್ರದ ಘನತೆಯನ್ನು ಕಾಪಾಡಿಕೊಳ್ಳಲು ಮತ್ತು ರೀಲ್ಸ್ಗಳು ಅಥವಾ ವೀಡಿಯೊಗಳಿಗೆ ಇಲಾಖೆಯ ಯಾವುದೇ ಉಪಕರಣಗಳು ಅಥವಾ ಪರಿಕರಗಳನ್ನು ಬಳಸದಂತೆ ಸೂಚಿಸಲಾಗಿದೆ.
ದಿಲ್ಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರು ಶುಕ್ರವಾರ ಹೊರಡಿಸಿದ ಮಾರ್ಗಸೂಚಿಯಲ್ಲಿ, ʼಸಾಮಾಜಿಕ ಮಾಧ್ಯಮಗಳ ಮೂಲಕ ಬಾಲಾಪರಾಧಿ ಅಥವಾ ಲೈಂಗಿಕ ದೌರ್ಜನ್ಯದ ದೂರುದಾರರ ಗುರುತನ್ನು ಬಹಿರಂಗಪಡಿಸುವುದು ಕಾನೂನುಬಾಹಿರʼ ಎಂದು ಎಚ್ಚರಿಸಲಾಗಿದೆ.
ಯಾವುದೇ ಸಂರಕ್ಷಿತ ವ್ಯಕ್ತಿ ಅಥವಾ ಹೆಚ್ಚಿನ ಭದ್ರತಾ ಪ್ರದೇಶ/ಆವರಣದ ಛಾಯಾಚಿತ್ರಗಳು ಅಥವಾ ವೀಡಿಯೊಗಳನ್ನು ಪೊಲೀಸರು ರೆಕಾರ್ಡ್ ಮಾಡುವುದು ಮತ್ತು ರವಾನಿಸುವುದು ಕಾನೂನುಬಾಹಿರವಾಗಿದೆ ಎಂದು ಮಾರ್ಗಸೂಚಿ ಹೇಳಿದೆ.
ಶಿಸ್ತುಬದ್ಧ ಪಡೆಯ ಸದಸ್ಯರಾಗಿರುವ ಪೊಲೀಸರು ರಾಷ್ಟ್ರೀಯ ಹಿತಾಸಕ್ತಿ ಅಥವಾ ಆಂತರಿಕ ಭದ್ರತೆಗೆ ವಿರುದ್ಧವಾದ ಯಾವುದನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಬಾರದು ಎಂದು ಪೊಲೀಸ್ ಆಯುಕ್ತರು ಉಲ್ಲೇಖಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ವಿಷಯವು ಕಾನೂನುಬಾಹಿರ, ಅಶ್ಲೀಲ, ಅವಹೇಳನಕಾರಿ, ಬೆದರಿಕೆ ಅಥವಾ ಕಾಪಿ ರೈಟ್ಗಳನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಮಾರ್ಗಸೂಚಿಗಳು ತಿಳಿಸಿವೆ.
ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ನೀತಿ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಪೋಸ್ಟ್ ಮಾಡಬಾರದು. ಯಾವುದೇ ಧರ್ಮ, ಜಾತಿ, ಪಂಥ ಅಥವಾ ಉಪಜಾತಿಯನ್ನು ಉತ್ತೇಜಿಸಲು ಅಥವಾ ಪ್ರಚೋದಿಸಲು ರಚಿಸಲಾದ ಯಾವುದೇ ಗುಂಪು ಅಥವಾ ವೇದಿಕೆಯಲ್ಲಿ ಅವರು ಭಾಗವಹಿಸುವುದು ಕಾನೂನುಬಾಹಿರವಾಗಿದೆ ಎಂದು ಅದು ಹೇಳಿದೆ.
ಯಾವುದೇ ರಾಜಕೀಯ ವಿಷಯದ ಪರವಾಗಿ ಅಥವಾ ವಿರುದ್ಧವಾಗಿರುವ ಯಾವುದೇ ಸಾಮಾಜಿಕ ಮಾಧ್ಯಮ ಅಭಿಯಾನದ ಭಾಗವಾಗದಂತೆ ಮಾರ್ಗಸೂಚಿ ಹೇಳಿದೆ.