ಭಯೋತ್ಪಾದಕ ಗುಂಪು ಸಿಮಿ ಮೇಲಿನ ನಿಷೇಧ ಇನ್ನೂ ಐದು ವರ್ಷ ವಿಸ್ತರಣೆ, ಅದು ದೇಶಕ್ಕೆ ಅಪಾಯ : ಅಮಿತ್ ಶಾ
ಅಮಿತ್ ಶಾ | Photo: PTI
ಹೊಸದಿಲ್ಲಿ: ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಒತ್ತಿ ಹೇಳಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ)ವನ್ನು ‘ಕಾನೂನುಬಾಹಿರ ಸಂಘಟನೆ ’ ಎಂದು ಘೋಷಿಸಲಾಗಿದೆ ಮತ್ತು ಭಯೋತ್ಪಾದನೆ ನಿಗ್ರಹ ಕಾನೂನಿನಡಿ ಅದರ ಮೇಲಿನ ನಿಷೇಧವನ್ನು ಇನ್ನೂ ಐದು ವರ್ಷಗಳಿಗೆ ವಿಸ್ತರಿಸಲಾಗಿದೆ ಎಂದು ಸೋಮವಾರ ಎಕ್ಸ್ ಪೋಸ್ಟ್ ನಲ್ಲಿ ಪ್ರಕಟಿಸಿದ್ದಾರೆ.
ಸಂಘಟನೆಯು ಭಾರತದ ಸಾರ್ವಭೌಮತೆ, ಭದ್ರತೆ ಮತ್ತು ಸಮಗ್ರತೆಗೆ ಬೆದರಿಕೆಯನ್ನೊಡ್ಡಲು ಭಯೋತ್ಪಾದನೆಯನ್ನು ಉತ್ತೇಜಿಸುವ, ಶಾಂತಿ ಮತ್ತು ಕೋಮು ಸೌಹಾರ್ದವನ್ನು ಕದಡುವ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎಂದು ಶಾ ಹೇಳಿದ್ದಾರೆ.
ಯುಪಿಎ ಆಡಳಿತದಲ್ಲಿಯೂ 2014, ಫೆ.1ರಂದು ಸಿಮಿಯನ್ನು ಐದು ವರ್ಷಗಳ ಅವಧಿಗೆ ನಿಷೇಧಿಸಲಾಗಿತ್ತು.
2017ರ ಗಯಾ ಸ್ಫೋಟ, 2014ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆದಿದ್ದ ಸ್ಫೋಟ ಇತ್ಯಾದಿಗಳು ಸಿಮಿ ನಡೆಸಿತ್ತೆನ್ನಲಾದ ಭಯೋತ್ಪಾದಕ ಕೃತ್ಯಗಳಲ್ಲಿ ಸೇರಿವೆ.
1977, ಎ.25ರಂದು ಉತ್ತರ ಪ್ರದೇಶದ ಅಲಿಗಡದಲ್ಲಿ ಸ್ಥಾಪನೆಗೊಂಡಿದ್ದ ಸಿಮಿ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಪರಿವರ್ತಿಸುವ ಮೂಲಕ ಅದನ್ನು ವಿಮೋಚನೆಗೊಳಿಸುವ ಕಾರ್ಯಸೂಚಿಯನ್ನು ಹೊಂದಿದೆ ಎಂದು ಆರೋಪಿಸಲಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಸರಕಾರವು ಅಧಿಕಾರದಲ್ಲಿದ್ದಾಗ 2001ರಲ್ಲಿ ಮೊದಲ ಬಾರಿಗೆ ಸಿಮಿಯನ್ನು ನಿಷೇಧಿಸಲಾಗಿತ್ತು. ನಂತರ ಪ್ರತಿ ಐದು ವರ್ಷಗಳಿಗೆ ನಿಷೇಧವನ್ನು ವಿಸ್ತರಿಸಲಾಗುತ್ತಿದೆ.