ವಾರಣಾಸಿಯ ವಿವಿಧೆಡೆ ಬಂದ್, ಬಿಗಿಪೊಲೀಸ್ ಬಂದೋಬಸ್ತ್
ಜ್ಞಾನವಾಪಿ ಮಸೀದಿ | Photo; PTI
ವಾರಣಾಸಿ : ಜ್ಞಾನವಾಪಿ ಮಸೀದಿಯ ತಳ ಅಂತಸ್ತಿನಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರದ ನಮಾಝ್ ವೇಳೆ ವಾರಣಾಸಿ ಜಿಲ್ಲೆಯಾದ್ಯಂತ ಪೊಲೀಸರನ್ನು ಕಟ್ಟೆಚ್ಚರದಲ್ಲಿರಿಲಾಗಿತ್ತು ಹಾಗೂ ನಗರದ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಅಂಗಡಿಮುಂಗಟ್ಟೆಗಳು ಬಂದ್ ಆಚರಿಸಲಾಯಿತು.
ಜ್ಞಾನವಾಪಿ ಮಸೀದಿಯ ವ್ಯವಹಾರಗಳನ್ನು ನೋಡಿಕೊಳ್ಳುವ ಅಂಜುಮಾನ್ ಇಂತೆಝಾಮಿಯಾ ಮಸೀದಿ ಸಮಿತಿಯು ಶುಕ್ರವಾರ ನಗರದಲ್ಲಿ ಬಂದ್ ಗೆ ಕರೆ ನೀಡಿತ್ತು. ದಾಲ್ಮಂಡಿ, ನಯೀ ಸಡಕ್, ನಡೆಸಾರ್ ಹಾಗೂ ಆರ್ದಾಲ್ ಬಝಾಪ್ ಗಳಲ್ಲಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಅಂಗಡಿಮುಂಗಟ್ಟೆಗಳನ್ನು ಮುಚ್ಚುವಂತೆ ಹಾಗೂ ಶುಕ್ರವಾರದ ನಮಾಜ್ ಶಾಂತಿಯುತವಾಗಿ ನಡೆಯಲು ಸಹಕರಿಸುವಂತೆ ಅಂಝುಮಾನ್ ಮಸೀದಿ ಸಮಿತಿಯು ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿತ್ತು.
ಪೊಲೀಸ್ ಆಯುಕ್ತ ಆಶೋಕ್ ಮುಥಾ ಜೈನ್ ಅವರು ಪೊಲೀಸ್ ಅಧಿಕಾರಿಗಳ ಜೊತೆ ತಡರಾತ್ರಿ ಸಭೆ ನಡೆಸಿ ಭದ್ರತಾ ಏರ್ಪಾಡುಗಳನ್ನು ಪರಿಶೀಲಿಸಿದರು. ಬಂದ್ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ನೆರೆಹೊರೆಯ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಯನ್ನು ಕರೆಸಿಕೊಳ್ಳಲಾಗಿತ್ತು. ಕಾಶಿ ವಿಶ್ವನಾಥ ಧಾಮ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾಪಡೆಗಳನ್ನು ನಿಯೋಜಿಸಲಾಗಿತ್ತು.
ಅಲ್ಲದೆ ನಗರದ ಸೂಕ್ಷ್ಮಸಂವೇದಿ ಪ್ರದೇಶಗಳಲ್ಲಿ ಕ್ಷಿಪ್ರ ಪೊಲೀಸ್ ಪಡೆ (ಆರ್ ಪಿ ಎಫ್) ಅನ್ನು ನಿಯೋಜಿಸಲಾಗಿತ್ತು.