ಬಾಂಗ್ಲಾದೇಶ-ಭಾರತ ಅಂಗಾಂಗ ಕಸಿ ದಂಧೆ | ದಿಲ್ಲಿಯ ಶಸ್ತ್ರಚಿಕಿತ್ಸೆ ತಜ್ಞೆ ಸಹಿತ 6 ಮಂದಿಯ ಬಂಧನ
PC : ANI
ಹೊಸದಿಲ್ಲಿ : ಬಾಂಗ್ಲಾದೇಶ ಹಾಗೂ ದಿಲ್ಲಿ-ಎನ್ಸಿಆರ್ ವಲಯದಲ್ಲಿ ಅಂಗಾಂಗ ಕಸಿ ದಂಧೆ ನಡೆಸುತ್ತಿರುವ ಆರೋಪಕ್ಕೆ ಸಂಬಂಧಿಸಿ ದಿಲ್ಲಿ ಮೂಲದ ವೈದ್ಯೆ ಸೇರಿದಂತೆ ಕನಿಷ್ಠ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸುಳಿವು ಆಧರಿಸಿ ದಿಲ್ಲಿ ಪೊಲೀಸ್ ನ ಕ್ರೈಮ್ ಬ್ರಾಂಚ್ ಕಳೆದ ಎರಡು ತಿಂಗಳಿಂದ ತನಿಖೆ ನಡೆಸುತ್ತಿದೆ. ಬಹುಪಾಲು ದಾನಿಗಳು ಹಾಗೂ ಸ್ವೀಕರಿಸುವವರು ಬಾಂಗ್ಲಾದೇಶಿಗರು. ನಕಲಿ ದಾಖಲೆಗಳನ್ನು ಬಳಸಿ ಇವರನ್ನು ಶಸ್ತ್ರಚಿಕಿತ್ಸೆಗೆ ಭಾರತಕ್ಕೆ ಕರೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈಶಾನ್ಯ ದಿಲ್ಲಿಯ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯೆಯೊಬ್ಬರು 2021 ಹಾಗೂ 2023ರ ನಡುವೆ ಬಾಂಗ್ಲಾದೇಶಿ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿರುವುದರಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಶಸ್ತ್ರಚಿಕಿತ್ಸೆಯನ್ನು ಅವರು ಅತಿಥಿ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನೋಯ್ಡಾದ ಆಸ್ಪತ್ರೆಯೊಂದರಲ್ಲಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ವೈದ್ಯರ ಸಹಾಯಕ ಹಾಗೂ ಮೂವರು ಬಾಂಗ್ಲಾದೇಶಿ ಪ್ರಜೆಗಳು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ಅಂತರ ರಾಷ್ಟ್ರೀಯ ಅಂಗಾಗ ಕಸಿ ದಂಧೆಗೆ ಸಂಬಂಧಿಸಿದಂತೆ 7 ಮಂದಿಯನ್ನು ಬಂಧಿಸಲಾಗಿದೆ. ಈ ದಂಧೆಯ ಸೂತ್ರದಾರ ಬಾಂಗ್ಲಾದೇಶದ ಪ್ರಜೆ’’ ಎಂದು ಕ್ರೈಮ್ ಬ್ರಾಂಚ್ ಡಿಸಿಪಿ ಅಮಿತ್ ಗೋಯಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.