ಸುಪಾರಿ ಹಂತಕರಿಂದ ಹತ್ಯೆಗೊಳಗಾಗುವುದಕ್ಕೂ ಮುನ್ನ ಹನಿಟ್ರ್ಯಾಪ್ ಗೊಳಗಾಗಿದ್ದ ಬಾಂಗ್ಲಾದೇಶ ಸಂಸದ: ವರದಿ
ಅನ್ವರುಲ್ ಅಝೀಂ | PC ; NDTV
ಹೊಸದಿಲ್ಲಿ: ಬಾಂಗ್ಲಾದೇಶ ಸಂಸದ ಅನ್ವರುಲ್ ಅಝೀಂ ಅನರ್ ಹತ್ಯೆಯ ಸಂಬಂಧ ಗುರುವಾರ ಸಂಜೆ ಪಶ್ಚಿಮ ಬಂಗಾಳ ಸಿಐಡಿ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸಂಸದ ಅನ್ವರುಲ್ ಅಝೀಂ ಅನರ್ ಅವರು ಹನಿಟ್ರ್ಯಾಪ್ ಗೊಳಗಾಗಿದ್ದರು ಎನ್ನಲಾಗಿದೆ. ಮಹಿಳೆಯೊಬ್ಬರ ಮೂಲಕ ಅವರನ್ನು ನ್ಯೂ ಟೌನ್ ಫ್ಲ್ಯಾಟ್ ಗೆ ಕರೆಸಿಕೊಂಡಿರುವ ಸುಪಾರಿ ಹಂತಕರು, ಅವರನ್ನು ಹತ್ಯೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬಂಧಿತ ವ್ಯಕ್ತಿಯು ಬಾಂಗ್ಲಾದೇಶದೊಂದಿಗೆ ಪಶ್ಚಿಮ ಬಂಗಾಳ ಹಂಚಿಕೊಂಡಿರುವ ಅಂತಾರಾಷ್ಟ್ರೀಯ ಗಡಿ ಪ್ರದೇಶದ ಬಳಿಯ ನಿವಾಸಿ ಎಂದು ಹೇಳಲಾಗಿದೆ.
ಬಂಧಿತ ವ್ಯಕ್ತಿಯು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳ ಪೈಕಿ ಓರ್ವನನ್ನು ಭೇಟಿ ಮಾಡಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಇಬ್ಬರು ವ್ಯಕ್ತಿಗಳು ಭೇಟಿಯಾಗಲು ಕಾರಣವೇನು ಹಾಗೂ ಭೇಟಿಯ ಸಂದರ್ಭದಲ್ಲಿ ಈ ಇಬ್ಬರು ವ್ಯಕ್ತಿಗಳು ಯಾವ ವಿಷಯದ ಕುರಿತು ಚರ್ಚಿಸಿದರು ಎಂಬುದನ್ನು ಪತ್ತೆ ಹಚ್ಚಲು ಮತ್ತಷ್ಟು ತನಿಖೆ ಪ್ರಗತಿಯಲ್ಲಿದೆ. ಬಂಧಿತ ವ್ಯಕ್ತಿಯ ಗುರುತನ್ನು ಈ ಹಂತದಲ್ಲಿ ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಅಮೆರಿಕ ಪ್ರಜೆಯಾದ ಸಂಸದರ ಸ್ನೇಹಿತನೊಬ್ಬ, ಅವರನ್ನು ಹತ್ಯೆಗೈಯ್ಯಲು ಈ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಹಂತಕರಿಗೆ ಅಂದಾಜು ರೂ. 5 ಕೋಟಿ ಪಾವತಿಸಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. ಈ ಸಂಗತಿಯನ್ನು ಹಿರಿಯ ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ.