ಬಾಂಗ್ಲಾದೇಶ ಸಂಸದನ ಹತ್ಯೆಗೈಯ್ಯಲು ಸ್ನೇಹಿತನಿಂದಲೇ ಸುಪಾರಿ?
ಅನ್ವರುಲ್ ಅಝೀಮ್ ಅನರ್ (Photo:X)
ಕೊಲ್ಕತ್ತಾ: ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಮ್ ಅನರ್ ಅವರ ʼಕೊಲೆʼ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ಅವರನ್ನು ಹತ್ಯೆಗೈಯ್ಯಲು ಅವರ ಸ್ನೇಹಿತರೊಬ್ಬರು ರೂ 5 ಕೋಟಿ ಪಾವತಿಸಿದ್ದರು ಎಂದು ಆರಂಭಿಕ ತನಿಖೆಯಿಂದ ತಿಳಿದ ಬಂದಿದೆ ಎಂಬ ಮಾಹಿತಿ ನೀಡಿದ್ದಾರೆ.
ಬಾಂಗ್ಲಾದೇಶದ ಆವಾಮಿ ಲೀಗ್ ಸಂಸದ ಅನ್ವರುಲ್ ಅಝೀಮ್ ಅನರ್ ಅವರ ಸ್ನೇಹಿತ ಕೊಲ್ಕತ್ತಾದಲ್ಲಿ ಫ್ಲ್ಯಾಟ್ ಒಂದನ್ನು ಹೊಂದಿದ್ದಾರೆ ಹಾಗೂ ಈಗ ಅಮೆರಿಕಾದಲ್ಲಿದ್ದಾರೆಂದು ನಂಬಲಾಗಿದೆ, ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾ ಸಂಸದ ಕೊನೆಯ ಬಾರಿಗೆ ಕೊಲ್ಕತ್ತಾದ ನ್ಯೂ ಟೌನ್ ಪ್ರದೇಶದ ಫ್ಲ್ಯಾಟ್ ಒಂದನ್ನು ಪ್ರವೇಶಿಸುತ್ತಿರುವುದು ಕಂಡು ಬಂದಿದೆ. ಆ ಫ್ಲ್ಯಾಟ್ ಮಾಲೀಕ, ಅಬಕಾರಿ ಇಲಾಖೆಯ ಉದ್ಯೋಗಿಯೊಬ್ಬರು ಅದನ್ನು ಸಂಸದನ ಸ್ನೇಹಿತರಿಗೆ ಬಾಡಿಗೆಗೆ ನೀಡಿದ್ದರೆಂದು ತಿಳಿದು ಬಂದಿದೆ.
ಮೇ 13ರಿಂದ ಕೊಲ್ಕತ್ತಾದಿಂದ ಕಾಣೆಯಾಗಿದ್ದ ಅನರ್ ಅವರನ್ನು ಕೊಲೆಗೈಯ್ಯಲಾಗಿದೆ, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾ ಗೃಹ ಸಚಿವ ಅಸದುಝಮನ್ ಖಾನ್ ಬುಧವಾರ ಹೇಳಿದ್ದರು.
ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಪೊಲೀಸರು ತಿಳಿಸಿದ್ದಾರೆ.
ಸಂಸದನ ಸ್ನೇಹಿತ ಅಮೆರಿಕಾ ಪೌರನಾಗಿದ್ದು ಕೊಲ್ಕತ್ತಾದಲ್ಲಿ ಫ್ಲ್ಯಾಟ್ ಹೊಂದಿದ್ದಾರೆ. ಅನರ್ ಕೊಲೆಯಾಗಿರಬಹುದು ಆದರೆ ಅವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಫ್ಲ್ಯಾಟ್ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ ಹಾಗೂ ಹಲವು ಪ್ಲ್ಯಾಸ್ಟಿಕ್ ಚೀಲಗಳು ಪತ್ತೆಯಾಗಿದ್ದು ಇವುಗಳಲ್ಲಿ ಸಂಸದನ ಮೃತದೇಹದ ತುಂಡುಗಳನ್ನು ಸಾಗಿಸಿ ವಿಲೇವಾರಿ ಮಾಡಿರಬಹುದೆಂಬ ಶಂಕೆಯಿದೆ. ದೇಹದ ಕೆಲ ಭಾಗಗಳನ್ನು ರೆಫ್ರಿಜರೇಟರ್ನಲ್ಲಿಯೂ ಇಟ್ಟಿರಬಹುದೆಂಬ ಶಂಕೆಯಿದ್ದು ಅದರಲ್ಲಿನ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 12ರಂದು ಸಂಸದ ಕೊಲ್ಕತ್ತಾಗೆ ಚಿಕಿತ್ಸೆಗಾಗಿ ಆಗಮಿಸಿದ್ದರು. ಆದರೆ ಮೇ 18ರಂದು ಅವರ ಪರಿಚಯದ ವ್ಯಕ್ತಿಯಾಗಿರುವ ಗೋಪಾಲ್ ಬಿಸ್ವಾಸ್ ಎಂಬವರು ನಾಪತ್ತೆ ದೂರು ದಾಖಲಿಸಿದ್ದರು. ಅನರ್ ಆರಂಭದಲ್ಲಿ ಬಿಸ್ವಾಸ್ ಮನೆಯಲ್ಲಿ ತಂಗಿದ್ದರೆ ಮೇ 13ರಂದು ವೈದ್ಯರ ಭೇಟಿಗಾಗಿ ತೆರಳಿ ರಾತ್ರಿ ವಾಪಸ್ ಬರುವುದಾಗಿ ತಿಳಿಸಿದ್ದರು. ಮೇ 17ರಿಂದ ಅವರು ಸಂಪರ್ಕಕ್ಕೆ ಸಿಗದೇ ಇದ್ದುದರಿಂದ ದೂರು ದಾಖಲಿಸಿದ್ದಾಗಿ ಬಿಸ್ವಾಸ್ ಹೇಳಿದ್ದಾರೆ.