ಕೋಲ್ಕತಾ, ಅಗರ್ತಲಾದಲ್ಲಿನ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡ ಬಾಂಗ್ಲಾ
ಭಾರತ-ಬಾಂಗ್ಲಾ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣ
PC : PTI
ಢಾಕಾ: ಉಭಯ ದೇಶಗಳ ನಡುವೆ ಬಿಕ್ಕಟ್ಟು ಉಲ್ಬಣಿಸಿರುವ ಮಧ್ಯೆ, ಬಾಂಗ್ಲಾ ದೇಶವು ಶುಕ್ರವಾರ ಭಾರತದಲ್ಲಿನ ತನ್ನ ಇಬ್ಬರು ರಾಜತಾಂತ್ರಿಕರನ್ನು ‘ತುರ್ತಾಗಿ’ ಹಿಂದಕ್ಕೆ ಕರೆಸಿಕೊಂಡಿದೆ.
ಕೋಲ್ಕತಾದಲ್ಲಿನ ಹಂಗಾಮಿ ಉಪ ಹೈಕಮೀಶನರ್ ಸಿಕಂದರ್ ಮುಹಮ್ಮದ್ ಅಶ್ರಫುಲ್ ರಹ್ಮಾನ್ ಹಾಗೂ ಅಗರ್ತಲಾದಲ್ಲಿನ ಸಹಾಯಕ ಹೈಕಮೀಶನರ್ ಅವರನ್ನು ಮುಹಮ್ಮದ್ ಯೂನುಸ್ ನೇತೃತ್ವದ ಬಾಂಗ್ಲಾ ಸರಕಾರವು ಹಿಂದಕ್ಕೆ ಕರೆಸಿಕೊಂಡಿದೆ.
ದೇಶದ್ರೋಹದ ಆರೋಪದಲ್ಲಿ ಹಿಂದೂ ಧಾರ್ಮಿಕ ಮುಖಂಡ ಚಿನ್ಮಯ ಕೃಷ್ಣ ದಾಸ್ ಪ್ರಭು ಅವರ ಬಂಧನ ಮತ್ತು ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಗಡಿರಾಜ್ಯಗಳಾದ ಪಶ್ಚಿಮಬಂಗಾಳ ಹಾಗೂ ತ್ರಿಪುರಾದಲ್ಲಿ ಪ್ರತಿಭಟನೆಗಳು ನಡೆದಿರುವ ಬೆನ್ನಲ್ಲೇ ಬಾಂಗ್ಲಾ ಸರಕಾರ ಈ ನಿರ್ಧಾರವನ್ನು ಕೈಗೊಂಡಿದೆ.
ಮುಂದಿನ ಸೂಚನೆ ನೀಡುವವರೆಗೆ ಢಾಕಾದಿಂದಲೇ ಕರ್ತವ್ಯ ನಿರ್ವಹಿಸುವಂತೆ ಅವರಿಗೆ ತಿಳಿಸಲಾಗಿದೆ ಎಂದು ಹೊಸದಿಲ್ಲಿಯಲ್ಲಿರುವ ಬಾಂಗ್ಲಾ ರಾಯಭಾರಿ ಕಚೇರಿಯ ಮೂಲಗಳು ತಿಳಿಸಿವೆ.
ಸಿಕಂದರ್ ಮುಹಮ್ಮದ್ ಅವರು ಗುರುವಾರದಂದೇ ಬಾಂಗ್ಲಾದೇಶಕ್ಕೆ ಮರಳಿದ್ದರೆ, ಆರೀಫ್ ಮುಹಮ್ಮದ್ ಅವರು ಶನಿವಾರದೊಳಗೆ ಢಾಕಾಗೆ ವಾಪಸಾಗಲಿದ್ದಾರೆ. ತುರ್ತು ಸನ್ನಿವೇಶದ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ಮರಳುವಂತ ಅವರಿಗೆ ಮಂಗಳವಾರ ಆದೇಶಿಸಲಾಗಿತ್ತು.
ಈ ವಾರದ ಆರಂಭದಲ್ಲಿ ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿರುವ ಬಾಂಗ್ಲಾದ ಸಹಾಯಕ ಹೈಕಮೀಶನರ್ ಕಾರ್ಯಾಲಯದ ಮೇಲೆ ನುಗ್ಗಿ ದಾಂಧಲೆ ನಡೆಸಿದ ಘಟನೆಯ ಬಳಿಕ ಬಾಂಗ್ಲಾ ತನ್ನ ದೂತಾವಾಸ ಸೇವೆಗಳನ್ನು ಅಮಾನತುಗೊಳಿಸಿತ್ತು.
ಈ ಘಟನೆಯ ಬಳಿಕ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಹೇಳಿಕೆಯೊಂದನ್ನು ನೀಡಿ, ಪ್ರತಿಭಟನಕಾರರಿಗೆ ದೂತಾವಾಸ ಕಚೇರಿಯ ಆವರಣವನ್ನು ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿತ್ತು. ಆ ಬಳಿಕ ಪ್ರತಿಭಟನಾಕಾರರು ಧ್ವಜಸ್ತಂಭವನ್ನು ಹಾಳುಗೆಡವಿದರಲ್ಲದೆ ಬಾಂಗ್ಲಾದ ರಾಷ್ಚ್ರಧ್ವಜವನ್ನು ಅಪವಿತ್ರಗೊಳಿಸಿದರೆಂದು ಆಪಾದಿಸಿತ್ತು.