ಶೇಖ್ ಹಸೀನಾರನ್ನು ವಾಪಸ್ ಕಳುಹಿಸುವಂತೆ ಭಾರತಕ್ಕೆ ಬಾಂಗ್ಲಾದೇಶದ ಮಧ್ಯಂತರ ಸರಕಾರದಿಂದ ಸಂದೇಶ
ಶೇಖ್ ಹಸೀನಾ | PC : PTI
ಹೊಸದಿಲ್ಲಿ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಢಾಕಾಗೆ ವಾಪಸ್ ಕಳುಹಿಸುವಂತೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಭಾರತಕ್ಕೆ ರಾಜತಾಂತ್ರಿಕ ಸಂದೇಶವನ್ನು ಕಳುಹಿಸಿದೆ.
ʼಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ನರಮೇಧʼವನ್ನು ಆರೋಪಿಸಿ ಢಾಕಾ ಮೂಲದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ(ICT) ಶೇಖ್ ಹಸೀನಾ ಮತ್ತು ಅವರ ಮಂತ್ರಿಗಳು, ಸಲಹೆಗಾರರು ಮತ್ತು ಮಾಜಿ ಮಿಲಿಟರಿ ಮತ್ತು ನಾಗರಿಕ ಅಧಿಕಾರಿಗಳ ಬಂಧನಕ್ಕೆ ಈ ಮೊದಲು ವಾರೆಂಟ್ ಗಳನ್ನು ಹೊರಡಿಸಿತ್ತು.
ಮಧ್ಯಂತರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹುಸೇನ್ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದು, ನ್ಯಾಯಾಂಗ ಪ್ರಕ್ರಿಯೆಗಾಗಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ವಾಪಾಸ್ಸು ಕಳುಹಿಸಬೇಕೆಂದು ನಾವು ಭಾರತ ಸರಕಾರಕ್ಕೆ ಮೌಖಿಕವಾದ ರಾಜತಾಂತ್ರಿಕ ಸಂದೇಶ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.
ಬಾಂಗ್ಲಾ ಗೃಹ ಇಲಾಖೆಯ ಸಲಹೆಗಾರ ಜಹಾಂಗೀರ್ ಆಲಂ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, ಹಸೀನಾ ಅವರ ಹಸ್ತಾಂತರಕ್ಕೆ ಅನುಕೂಲವಾಗುವಂತೆ ವಿದೇಶಾಂಗ ಸಚಿವಾಲಯಕ್ಕೆ ಪತ್ರವನ್ನು ಕಳುಹಿಸಲಾಗಿದೆ. ಈ ಕುರಿತ ಪ್ರಕ್ರಿಯೆಯು ನಡೆಯುತ್ತಿದೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ವ್ಯಾಪಕವಾಗಿ ಪ್ರತಿಭಟನೆ ಭುಗಿಲೆದ್ದ ಹಿನ್ನೆಲೆ ಆ.5ರಂದು ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾದೇಶ ತೊರೆದು ಭಾರತಕ್ಕೆ ಪಲಾಯನ ಮಾಡಿದ್ದರು.