ವಯನಾಡ್ ದುರಂತದ ಸಂತ್ರಸ್ತರ ಪರಿಹಾರ ಹಣದಿಂದ ಇಎಂಐ ಕಡಿತಗೊಳಿಸಿದ ಕೇರಳ ಗ್ರಾಮೀಣ ಬ್ಯಾಂಕ್; ವ್ಯಾಪಕ ಆಕ್ರೋಶ
Photo: PTI
ವಯನಾಡ್: ಭೀಕರ ಭೂಕುಸಿತಕ್ಕೆ ಸಾಕ್ಷಿಯಾದ ವಯನಾಡ್ ದುರಂತದಲ್ಲಿ ಬದುಕುಳಿದವರಿಗೆ ರಾಜ್ಯ ಸರ್ಕಾರ ಒದಗಿಸಿದ ತುರ್ತು ಪರಿಹಾರ ಹಣದಿಂದ ಸಾಲದ ಇಎಂಐಗಳನ್ನು ಕಡಿತಗೊಳಿಸಿದ ಕೇರಳ ಗ್ರಾಮೀಣ ಬ್ಯಾಂಕ್ ಜನರ ಆಕ್ರೋಶಕ್ಕೆ ಈಡಾಗಿದೆ.
ತಮ್ಮ ಪ್ರೀತಿಪಾತ್ರರನ್ನು ಹಾಗೂ ಮನೆಗಳನ್ನು ಕಳೆದುಕೊಂಡು ಅತಂತ್ರರಾಗಿರುವ ಸಂತ್ರಸ್ತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ನಡುವೆ ಬ್ಯಾಂಕಿನ ಈ ಕ್ರಮ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಕೇರಳ ಗ್ರಾಮೀಣ ಬ್ಯಾಂಕ್ನಲ್ಲಿ ಕೇಂದ್ರ ಸರ್ಕಾರ ದೊಡ್ಡ ಪಾಲು ಹೊಂದಿದ್ದು, ನೇರವಾಗಿ ಕೇಂದ್ರದ ಪಾಲು ಶೇ50 ರಷ್ಟಿದ್ದರೆ ಇನ್ನೊಂದು ಶೇ35ರಷ್ಟು ಪಾಲು ಸಾರ್ವಜನಿಕ ರಂಗದ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ನದ್ದಾಗಿದೆ. ಕೇರಳ ಸರ್ಕಾರ ಈ ಬ್ಯಾಂಕ್ನಲ್ಲಿ ಶೇ15ರಷ್ಟು ಪಾಲು ಹೊಂದಿದೆ.
ಕೇರಳದ ಎಡರಂಗ ಸರ್ಕಾರ ಸಂತ್ರಸ್ತರಿಗೆ ತುರ್ತು ಪರಿಹಾರವಾಗಿ ರೂ. 10,000 ಘೋಷಿಸಿತ್ತು. ಆದರೆ ಈ ಮೊತ್ತದಲ್ಲಿ ಸಾಲ ಇಎಂಐ ರೂಪದಲ್ಲಿ ಬ್ಯಾಂಕ್ ರೂ. 5000 ವರೆಗೆ ಕಡಿತಗೊಳಿಸಿದೆ ಎಂದು ಹಲವು ಸಂತ್ರಸ್ತರು ದೂರಿದ್ದಾರೆ.
ಕೇರಳ ಸಹಕಾರ ಸಚಿವ ವಿ ಎನ್ ವಾಸವನ್ ಈ ಕ್ರಮವನ್ನು ʼಕ್ರೂರʼ ಎಂದು ಬಣ್ಣಿಸಿದ್ದಾರೆ ಹಾಗೂ ಇದನ್ನು ರಾಜ್ಯ ಮಟ್ಟದ ಬ್ಯಾಂಕರ್ಗಳ ಸಮಿತಿ ಮುಂದೆ ಎತ್ತಲಾಗುವುದು ಎಂದು ಹೇಳಿದ್ದಾರೆ.
ಸಮಿತಿಯ ಜನರಲ್ ಮ್ಯಾನೇಜರ್ ಕೆ ಎಸ್ ಪ್ರದೀಪ್ ಪ್ರತಿಕ್ರಿಯಿಸಿ ತಾವು ಈ ಬಗ್ಗೆ ಗ್ರಾಮೀಣ ಬ್ಯಾಂಕ್ ಮುಖ್ಯಸ್ಥರನ್ನು ಸಂಪರ್ಕಿಸಿದ್ದಾಗಿ ಹಾಗೂ ವಿಪತ್ತಿನ ಸಂದರ್ಭ ಖಾತೆಗಳಲ್ಲಿದ್ದ ಸ್ಥಾಯಿ ಸೂಚನೆಗಳನ್ನಾಧರಿಸಿ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಸಾಲದ ಕಂತಿಗೆ ಕಡಿತಗೊಳಿಸಿದ ಹಣವನ್ನು ಸಂತ್ರಸ್ತರಿಗೆ ವಾಪಸ್ ನೀಡುವಂತೆ ವಯನಾಡ್ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಿಇಒ ಕೇರಳ ಗ್ರಾಮೀಣ ಬ್ಯಾಂಕ್ಗೆ ಆದೇಶಿಸಿದ್ದಾರೆ.