"ಬತೇಂಗೆ ತೋ ಕಟೇಂಗೆ" ಘೋಷಣೆಗೆ ಬಿಜೆಪಿಯಲ್ಲೇ ಅಪಸ್ವರ!
ಅಶೋಕ್ ಚವ್ಹಾಣ್ PC: x.com/ndtvfeed
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ "ಬತೇಂಗೇ ತೊ ಕಟೇಂಗೆ' (ವಿಭಜನೆಯಿಂದ ವಿನಾಶ) ಎಂಬ ಘೋಷಣೆಗೆ ಮಹಾಯುತಿ ಮೈತ್ರಿಕೂಟದ ಪಕ್ಷಗಳಲ್ಲಿ ಮಾತ್ರವಲ್ಲದೇ, ಬಿಜೆಪಿಯಲ್ಲೇ ಅಪಸ್ವರಗಳು ಕೇಳಿಬಂದಿವೆ. ಪಕ್ಷದ ಮುಖಂಡರಾದ ಪಂಕಜಾ ಮುಂಢೆ ಮತ್ತು ಅಶೋಕ್ ಚವ್ಹಾಣ್ ಅವರು ಯೋಗಿ ಘೋಷಣೆಯ ವಿರುದ್ಧ ಧ್ವನಿ ಎತ್ತಿದ್ದಾರೆ.
ಮಿತ್ರಪಕ್ಷಗಳ ಪೈಕಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮುಖಂಡ ಅಜಿತ್ ಪವಾರ್ ಈಗಾಗಲೇ ಯೋಗಿ ಘೋಷಣೆಯನ್ನು ಖಂಡಿಸಿದ್ದಾರೆ. ಇಂಥ ಘೋಷಣೆಗಳು ಉತ್ತರದಲ್ಲಿ ಪ್ರಯೋಜನಕ್ಕೆ ಬರಬಹುದು. ಆದರೆ ಸಂತರ ನಾಡು, ಶಿವನ ಅನುಯಾಯಿಗಳ ಮಹಾರಾಷ್ಟ್ರಕ್ಕೆ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿರೋಧ ಪಕ್ಷಗಳು ಈ ಘೋಷಣೆಯನ್ನು ಕಟುವಾಗಿ ಟೀಕಿಸಿದ್ದು, ಕೋಮು ಪ್ರಚೋದಕ ಎಂದು ಬಣ್ಣಿಸಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಇದನ್ನು ಅನುಕರಿಸಿದ್ದು, "ಏಕ್ ಹೇ ತೋ ಸೇಫ್ ಹೇ" ಎಂದು ವಿಶ್ಲೇಷಿಸಿದ್ದಾರೆ. ಆದಾರೂ ಪಕ್ಷದ ಹಲವು ಮುಖಂಡರಿಗೆ ಇದು ಪಥ್ಯವಾಗಿಲ್ಲ.
ಬಿಜೆಪಿ ನಾಯಕರಾಗಿದ್ದ ಗೋಪಿನಾಥ್ ಮುಂಢೆಯವರ ಪುತ್ರಿ ಪಂಕಜಾ ಮುಂಢೆ ಈ ಬಗ್ಗೆ ಧ್ವನಿ ಎತ್ತಿದವರಲ್ಲಿ ಮೊದಲನೆಯವರು. "ಮುಕ್ತವಾಗಿ ಹೇಳಬೇಕೆಂದರೆ ನನ್ನ ನೀತಿಗಳು ಭಿನ್ನ. ಒಂದೇ ಪಕ್ಷಕ್ಕೆ ಸೇರಿದಾಕೆ ಎಂಬ ಕಾರಣಕ್ಕೆ ನಾನು ಅದನ್ನು ಬೆಂಬಲಿಸುವುದಿಲ್ಲ. ನಾವೆಲ್ಲರೂ ಅಭಿವೃದ್ಧಿ ವಿಚಾರದಲ್ಲಿ ಮಾತ್ರವೇ ಕೆಲಸ ಮಾಡಬೇಕು ಎನ್ನುವುದು ನನ್ನ ನಂಬಿಕೆ. ಈ ನೆಲದಲ್ಲಿ ವಾಸಿಸುವ ಎಲ್ಲರಲ್ಲೂ ಇದು ನಮ್ಮದು ಎಂಬ ಭಾವನೆ ಮೂಡಿಸುವುದು ನಾಯಕನ ಕೆಲಸ. ಆದ್ದರಿಂದ ಅಂಥ ವಿಚಾರಗಳನ್ನು ಮಹಾರಾಷ್ಟ್ರಕ್ಕೆ ತರುವ ಅಗತ್ಯವಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ತೊರೆದು ಬಿಜೆಪಿ ಪಾಳಯಕ್ಕೆ ಬಂದಿರುವ ಅಶೋಕ್ ಚವ್ಹಾಣ್ ಕೂಡಾ ಈ ಘೋಷಣೆಯನ್ನು ವಿರೋಧಿಸಿ, "ಈ ಘೋಷಣೆಗೆ ಪ್ರಸ್ತುತತೆ ಇಲ್ಲ. ಚುನಾವಣೆ ಸಂದರ್ಭದಲ್ಲಿ ಘೋಷಣೆಗಳು ಬರುತ್ತವೆ. ಆದರೆ ಈ ಘೋಷಣೆ ಸದಭಿರುಚಿಯದ್ದಲ್ಲ. ಇದನ್ನು ಜನತೆ ಶ್ಲಾಘಿಸುತ್ತಾರೆ ಎಂದು ನನಗೆ ಅನಿಸುವುದಿಲ್ಲ. ವೈಯಕ್ತಿಕವಾಗಿ ಹೇಳಬೇಕೆಂದರೆ ನಾನು ಈ ಘೋಷಣೆಯ ಪರವಾಗಿ ಇಲ್ಲ" ಎಂದು ಪಿಟಿಐ ಜತೆ ಮಾತನಾಡುವ ವೇಳೆ ಸ್ಪಷ್ಟಪಡಿಸಿದರು.