ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ

ನರೇಂದ್ರ ಮೋದಿ | PC : NDTV
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಕುರಿತು ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ ನಿರ್ಮಿಸಿದ್ದ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಸಾಕ್ಷ್ಯಚಿತ್ರದಿಂದ ದೇಶದ ಘನತೆಗೆ ಕುಂದುಂಟಾಗಿದೆ ಹಾಗೂ ಈ ಸಾಕ್ಷ್ಯಚಿತ್ರವು ಮೋದಿ ಕುರಿತು ಅವಹೇಳನಕಾರಿ ಅಂಶಗಳನ್ನು ಹೊಂದಿದೆ ಎಂದು ಆರೋಪಿಸಿ ಗುಜರಾತ್ ಮೂಲದ ಸರಕಾರೇತರ ಸಂಸ್ಥೆಯೊಂದು ಹೂಡಿದ್ದ ದಾವೆಯ ವಿಚಾರಣೆಯಿಂದ ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ನ್ಯಾ. ಅನೂಪ್ ಜೈರಾಂ ಭಂಭಾನಿ ಹಿಂದೆ ಸರಿದಿದ್ದಾರೆ.
ಸಾಕ್ಷ್ಯಚಿತ್ರದ ವಿರುದ್ಧ ದಾಖಲಾಗಿರುವ ಅರ್ಜಿಯ ವಿಚಾರಣೆಯು ನ್ಯಾ. ಅನೂಪ್ ಜೈರಾಮ್ ಭಂಭಾನಿ ಅವರಿದ್ದ ನ್ಯಾಯಪೀಠದ ಮುಂದೆ ಬಂದಿತ್ತು. ಆದರೆ, ಈ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಒಳಪಟ್ಟು, ಮೇ 22ರಂದು ಮತ್ತೊಂದು ಪೀಠಕ್ಕೆ ವರ್ಗಾಯಿಸುವಂತೆ ಅವರು ಸೂಚಿಸಿದರು.
ಇದಕ್ಕೂ ಮುನ್ನ, ಗುಜರಾತ್ ಮೂಲದ ಸರಕಾರೇತರ ಸಂಸ್ಥೆ ದಾಖಲಿಸಿದ್ದ ಅರ್ಜಿಯನ್ನು ಆಧರಿಸಿ ಬಿಬಿಸಿ (ಬ್ರಿಟನ್) ಹಾಗೂ ಬಿಬಿಸಿ(ಭಾರತ)ಗೆ ದಿಲ್ಲಿ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು.
ಗುಜರಾತ್ ಮೂಲದ ಸರಕಾರೇತರ ಸಂಸ್ಥೆಯಾದ ‘ಜಸ್ಟೀಸ್ ಆನ್ ಟ್ರಯಲ್’ “ಬ್ರಿಟನ್ ನ ರಾಷ್ಟ್ರೀಯ ಸುದ್ದಿ ಸಂಸ್ಥೆಯಾದ ಬಿಬಿಸಿಯು ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಎಂಬ ಸಾಕ್ಷ್ಯಚಿತ್ರವನ್ನು ಬಿಬಿಸಿ(ಭಾರತ)ದ ಮೂಲಕ ಜನವರಿ, 2023ರಲ್ಲಿ ಭಾರತದಲ್ಲಿ ಎರಡು ಭಾಗಗಳಲ್ಲಿ ಪ್ರಸಾರ ಮಾಡಿತ್ತು. ಈ ಸಾಕ್ಷ್ಯಚಿತ್ರದಿಂದಾಗಿ ದೇಶದ ಘನತೆಗೆ ಕುಂದುಂಟಾಗಿದ್ದು, ಈ ಸಾಕ್ಷ್ಯಚಿತ್ರದ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ನ್ಯಾಯಾಂಗದ ವಿರುದ್ಧ ಸುಳ್ಳು ಹಾಗೂ ಮಾನಹಾನಿಕಾರಕ ಆರೋಪಗಳನ್ನು ಮಾಡಲಾಗಿದೆ” ಎಂದು ದೂರಿತ್ತು.
2002ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಗೋಧ್ರಾ ಗಲಭೆಯ ಕುರಿತು ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿತ್ತು. ಈ ಸಾಕ್ಷ್ಯಚಿತ್ರವು ಬಿಡುಗಡೆಯಾದ ಕೂಡಲೇ ಕೇಂದ್ರ ಸರಕಾರವು ಅದನ್ನು ನಿಷೇಧಿಸಿತ್ತು.
ಇದರ ಬೆನ್ನಲ್ಲೇ, ಈ ಸಾಕ್ಷ್ಯಚಿತ್ರವನ್ನು ಆಧರಿಸಿದ ಕೆಲವು ವಿಡಿಯೊ ಹಾಗೂ ಮಾಹಿತಿಯನ್ನು ತೆಗೆದು ಹಾಕುವಂತೆ ಯೂಟ್ಯೂಬ್ ಹಾಗೂ ಟ್ವಿಟರ್ ಗಳಿಗೆ ಕೇಂದ್ರ ಸರಕಾರ ಸೂಚಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವಾಲಯವು, ಇದೊಂದು ವಸಾಹತುಶಾಹಿ ಮನಸ್ಥಿತಿಯ ಪ್ರಚಾರದ ತುಣುಕು ಎಂದು ಕಿಡಿ ಕಾರಿತ್ತು.