ಸಾಮಾಜಿಕ ಜಾಲತಾಣ ಬಳಸುವಾಗ ‘ಪರಿಣಾಮ’ದ ಬಗ್ಗೆಯೂ ಎಚ್ಚರವಿರಲಿ: ಸುಪ್ರೀಂ ಕೋರ್ಟ್
ಸುಪ್ರೀಂಕೋರ್ಟ್ | Photo: PTI
ಹೊಸದಿಲ್ಲಿ: ಮಹಿಳಾ ಪತ್ರಕರ್ತರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನೊಳಗೊಂಡ ಫೇಸ್ಬುಕ್ ಪೋಸ್ಟ್ ಒಂದನ್ನು ಹಂಚಿಕೊಂಡ ಪ್ರಕರಣದಲ್ಲಿ ತನ್ನ ವಿರುದ್ಧ ನಡೆಯುತ್ತಿರುವ ಎಲ್ಲಾ ರೀತಿಯ ಕ್ರಿಮಿನಲ್ ವಿಚಾರಣಾ ಕಲಾಪಗಳನ್ನು ರದ್ದುಗೊಳಿಸಬೇಕೆಂದು ಕೋರಿ ಚಿತ್ರನಟ ಹಾಗೂ ತಮಿಳುನಾಡಿನ ಮಾಜಿ ಶಾಸಕ ವಿ.ಶೇಖರ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಶನಿವಾರ ತಳ್ಳಿಹಾಕಿದೆ.
2018ರಲ್ಲಿ ತಾನು ಶೇರ್ ಮಾಡಿದ್ದ ಫೇಸ್ಬುಕ್ ಪೋಸ್ಟ್ಗೆ ಸಂಬಂಧಿಸಿದ ಕ್ರಿಮಿನಲ್ ವಿಚಾರಣಾ ಕಲಾಪಗಳನ್ನು ರದ್ದುಪಡಿಸಬೇಕೆಂದು ಕೋರಿ ಶೇಖರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ನ ಜುಲೈ 14ರಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಶೇಖರ್ ಅವರು ಸುಪ್ರೀಂಕೋರ್ಟ್ ನ ಮೊರೆ ಹೋಗಿದ್ದರು.
ಶೇಖರ್ ಅವರ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಪಿ.ಕೆ. ಮಿಶ್ರಾ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠವು, ಯಾವುದೇ ವ್ಯಕ್ತಿಯು ಸಾಮಾಜಿಕ ಜಾಲತಾಣಗಳಲ್ಲಿ ಬಳಸುವಾಗ ಅದರಿಂದಾಗುವ ಪರಿಣಾಮ ಹಾಗೂ ಅದು ತಲುಪುವ ರೀತಿಯ ಬಗ್ಗೆ ಅತ ಇನ್ನೂ ಹೆಚ್ಚು ಜಾಗರೂಕತೆಯಿಂದ ವರ್ತಿಸಬೇಕಾಗಿದೆ. ಇದರಿಂದಾಗಿ ಆತ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು’’ ಎಂದು ಅರ್ಜಿದಾರನ ಪರ ವಕೀಲರಾದಿಗೆ ತಿಳಿಸಿದರು.
ಶೇಖರ್ ಅವರು ಫೇಸ್ಬುಕ್ ನಲ್ಲಿ ವಿವಾದಿತ ಹೇಳಿಕೆಯನ್ನು ಶೇರ್ ಮಾಡುವಾಗ ಕಣ್ಣಿಗೆ ಔಷಧಿ ಹಾಕಿಕೊಂಡಿದ್ದರಿಂದ ಅವರಿಗೆ ಅದರಲ್ಲಿರುವ ವಿಷಯಗಳನ್ನು ಓದಲು ಸಾಧ್ಯವಾಗಲಿಲ್ಲವೆಂದು ವಕೀಲರು ವಾದಿಸಿದ್ದರು. ಶೇಖರ್ ಅವರು ತನ್ನ ಫೇಸ್ಬುಕ್ ಖಾತೆಯಲ್ಲಿ ನಿಂದನಾತ್ಮಕ, ಮಾನಹಾನಿಕರ ಹಾಗೂ ಅಶ್ಲೀಲ ಹೇಳಿಕೆಯನ್ನು ಪ್ರಕಟಿಸಿದ್ದರು ಹಾಗೂ ಪ್ರಸಾರ ಮಾಡಿದ್ದರು ಎಂದು 2018, ಎಪ್ರಿಲ್ 19ರಂದು ಚೆನ್ನೈ ಪೊಲೀಸ್ ಠಾಣೆಗೆ ದೂರು ನೀಡಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಶೇಖರ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು ಹಾಗೂ ತಮಿಳುನಾಡಿನ ವಿವಿಧೆಡೆ ಅವರ ವಿರುದ್ಧ ಇತರ ಖಾಸಗಿ ದೂರುಗಳು ದಾಖಲಾಗಿದ್ದವು.