ಜಿಂಕೆ ಬೇಟೆಯಾಡಿದ್ದ ಆರೋಪಿಗೆ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಬೆದರಿಕೆ; ಪೊಲೀಸರಿಂದ ತನಿಖೆ

ಲಾರೆನ್ಸ್ ಬಿಷ್ಣೋಯ್ | PC : X
ಮುಂಬೈ/ಥಾಣೆ : ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಜಿಂಕೆ ಬೇಟೆಯಾಡಿದ್ದ ಆರೋಪಿಗೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಬೆದರಿಕೆ ಬಂದಿದ್ದು, ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ಸ್ಥಳೀಯ ಬಿಜೆಪಿ ಕಾರ್ಯಕರ್ತ ಸತೀಶ್ ಭೋಸಲೆ, ಜಿಂಕೆ ಬೇಟೆಯಾಡಿದ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಸಾಮಾಜಿಕ ಮಾಧ್ಯಮ ಖಾತೆಯಿಂದ ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಬೆದರಿಕೆ ಬಂದಿದೆ ಎನ್ನಲಾಗಿದೆ.
‘ಖೋಕ್ಯ’ ಎಂದೂ ಕರೆಯಲ್ಪಡುವ ಸತೀಶ್ ಭೋಸಲೆ ಜಿಂಕೆ ಬೇಟೆಯಾಡಿದ ಆರೋಪ ಹೊತ್ತಿದ್ದು, ಅವರಿಗೆ ಫೇಸ್ಬುಕ್ ಖಾತೆಯಿಂದ ಬೆದರಿಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಉಲ್ಲೇಖಿಸಿ ಖಾತೆದಾರರು ಜಿಂಕೆ ಬೇಟೆಯಾಡಿದ್ದಕ್ಕಾಗಿ ಭೋಸಲೆಯನ್ನು ಬಂಧಿಸುವಂತೆ ಕೋರಿದ್ದಾರೆ. "ಜಿಂಕೆ ನಮ್ಮ ದೇವರು. ಖೋಕ್ಯ ಕ್ಷಮೆಗೆ ಅರ್ಹನಲ್ಲ" ಎಂದು ಸಂದೇಶದಲ್ಲಿ ಹೇಳಲಾಗಿದೆ.
ಈ ಸಂದೇಶದ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಇದು ನಕಲಿಯಾಗಿರಬಹುದು ಎಂದು ಹೇಳಿದ್ದಾರೆ.
"ಫೇಸ್ಬುಕ್ ಖಾತೆ ನಕಲಿಯಾಗಿರಬಹುದು. ಅದರ ಬಗ್ಗೆ ವಿವರಗಳನ್ನು ಒದಗಿಸಲು ನಾವು ಸಾಮಾಜಿಕ ಮಾಧ್ಯಮ ಸಂಸ್ಥೆಗೆ ಪತ್ರ ಬರೆದಿದ್ದೇವೆ. ಇಲ್ಲಿಯವರೆಗೆ ಯಾವುದೇ ಎಫ್ಐಆರ್ ದಾಖಲಿಸಲಾಗಿಲ್ಲ" ಎಂದು ಬೀಡ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಈ ಮಧ್ಯೆ, ಜಿಂಕೆ ಬೇಟೆಯಾಡಿದ ಆರೋಪದ ಮೇಲೆ ಭೋಸಲೆ ವಿರುದ್ಧ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದ್ದು, ಶಿರೂರ್ ತಾಲ್ಲೂಕಿನ ಹಲವಾರು ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ತಿಳಿದು ಬಂದಿದೆ.