ಬೀಡ್ ಸರಪಂಚನ ಹತ್ಯೆ ಪ್ರಕರಣ | ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ | PC : PTI
ಮುಂಬೈ : ಬೀಡ್ ಸರಪಂಚ್ ಸಂತೋಷ್ ದೇಶಮುಖ್ ಅವರ ಹತ್ಯೆಗೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ಮಹಾರಾಷ್ಟ್ರ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಈ ಇಬ್ಬರು ತಲೆಮರೆಸಿಕೊಂಡಿರುವ ವ್ಯಕ್ತಿಗಳ ಆಪ್ತರನ್ನು ವಿಶೇಷ ತನಿಖಾ ತಂಡ ವಿಚಾರಣೆ ನಡೆಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಆರೋಪಿಗಳಾದ ಸುದರ್ಶನ್ ಚಂದ್ರಭಾನ್ ಘುಲೆ (26) ಹಾಗೂ ಸುಧೀರ್ ಸಾಂಗ್ಲೆ (23) ತಲೆ ಮರೆಸಿಕೊಂಡಿದ್ದರು. ಅವರನ್ನು ಮಹಾರಾಷ್ಟ್ರದ ಧುಲೆಯಿಂದ ಬಂಧಿಸಲಾಗಿದೆ. ಧುಲೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ ಹಾಗೂ ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಲಯದಲ್ಲಿರುವ ಗಾಳಿ ಯಂತ್ರ ತಯಾರಿಸುವ ಯೋಜನೆಯ ಚುಕ್ಕಾಣಿ ಹಿಡಿದಿರುವ ಇಂಧನ ಕಂಪೆನಿಯಿಂದ ಹಣ ವಸೂಲಿ ಮಾಡುವುದನ್ನು ತಡೆಯಲು ಪ್ರಯತ್ನಿಸಿದ ಮಸ್ಸಜೋಗಾ ಗ್ರಾಮದ ಸರಪಂಚ್ ಸಂತೋಷ್ ದೇಶ್ಮುಖ್ ಅವರನ್ನು ಡಿಸೆಂಬರ್ 9ರಂದು ಅಪಹರಿಸಿ, ಹಿಂಸೆ ನೀಡಿ ಹತ್ಯೆಗೈಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಸಚಿವ ಧನಂಜಯ ಮುಂಡೆ ಅವರು ಆಪ್ತ ವಾಲ್ಮೀಕ್ ಕರಾಡ್ ಅವರನ್ನು ಬಂಧಿಸಲಾಗಿತ್ತು. ಕರಾಡ್ ಮಂಗಳವಾರ ಶರಣಾಗಿದ್ದ. ಆತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.