ಮೋದಿ ಪ್ರಚಾರಕ್ಕೆ ಬರುವ ಮುನ್ನ ಇ.ಡಿ. ಐ.ಟಿ, ಸಿಬಿಐಯನ್ನು ಕಳುಹಿಸುತ್ತಾರೆ: ಖರ್ಗೆ ಆರೋಪ
ಮಲ್ಲಿಕಾರ್ಜುನ ಖರ್ಗೆ Photo- PTI
ಜೋಧಪುರ: ಇ.ಡಿ. ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆ ನರೇಂದ್ರ ಮೋದಿ ಅವರ ‘ಜವಾನ’ರು ಎಂದು ವ್ಯಂಗ್ಯವಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಪ್ರತಿಪಕ್ಷದ ನಾಯಕರ ವಿರುದ್ಧ ತನಿಖೆ ನಡೆಸಲು ಕೇಂದ್ರ ತನಿಖಾ ಸಂಸ್ಥೆಗಳನ್ನು ಕಳುಹಿಸುತ್ತಾರೆ ಎಂದಿದ್ದಾರೆ.
ರಾಜಸ್ಥಾನದಲ್ಲಿ ನ.25ರಂದು ನಡೆಯಲಿರುವ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೋಧಪುರದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಈಗ ಬಡವರ ಬಗ್ಗೆ ಚಿಂತಿಸುತ್ತಿದ್ದಾರೆ. ಯಾಕೆಂದರೆ ಈಗ ಚುನಾವಣಾ ಸಮಯ ಎಂದರು.
ಉಚಿತ ಪಡಿತರ ಯೋಜನೆಯನ್ನು 5 ವರ್ಷಗಳಿಗೆ ವಿಸ್ತರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಕೆಲವು ದಿನಗಳ ಬಳಿಕ ಖರ್ಗೆ ಅವರು ಈ ವಾಗ್ದಾಳಿ ನಡೆಸಿದ್ದಾರೆ. ಮೋದಿ ಸರಕಾರ ಬಡವರಿಗೆ ತೊಂದರೆ ಉಂಟು ಮಾಡುತ್ತಿದೆ ಹಾಗೂ ಅದಾನಿಯಂತಹ ತನ್ನ ಉದ್ಯಮಿ ಗೆಳೆಯರನ್ನು ಬೆಂಬಲಿಸುತ್ತಿದೆ ಎಂದು ಅವರು ಆರೋಪಿಸಿದರು.
ಪ್ರಧಾನಿ ಅವರನ್ನು ತರಾಟೆಗೆ ತೆಗೆದುಕೊಂಡ ಖರ್ಗೆ, ರಾಜ, ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿ ಸಾಮಾನ್ಯವಾಗಿ ಬಡವರಿಗೆ ನೆರವು ನೀಡಬೇಕು. ಆದರೆ ಒಬ್ಬ ವ್ಯಕ್ತಿ ಬಡವರ ಮತ ಪಡೆದು ಶ್ರೀಮಂತರಿಗೆ ನೆರವು ನೀಡುತ್ತಿದ್ದಾರೆ ಎಂದರು.
‘‘ಅವರ (ಮೋದಿ) ಯುಗದಲ್ಲಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ’’ ಎಂದು ಹೇಳಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಸಮೀಪಿಸುತ್ತಿರುವುದರಿಂದ ಈಗ ಬಡವರ ಬಗ್ಗೆ ಚಿಂತಿಸುತ್ತಿದ್ದಾರೆ ಎಂದರು.
ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಯ ಇತ್ತೀಚೆಗಿನ ಕ್ರಮವನ್ನು ಉಲ್ಲೇಖಿಸಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕೆ, ಭಾಷಣ ಮಾಡುವುದಕ್ಕೆ ಹೋಗುವ ಮೊದಲು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಹಾಗೂ ಸಿಬಿಐಯನ್ನು ಪ್ರಚಾರಕ್ಕೆ ಕಳುಹಿಸುತ್ತಾರೆ ಎಂದರು.