100ನೇ ಟೆಸ್ಟ್ ಪಂದ್ಯವನ್ನಾಡಲಿರುವ ಬೆನ್ ಸ್ಟೋಕ್ಸ್
ಬೆನ್ ಸ್ಟೋಕ್ಸ್ | Photo: PTI
ಹೊಸದಿಲ್ಲಿ : ಎರಡೂ ತಂಡಗಳು ಪ್ರಮುಖ ಆಟಗಾರರ ಅನುಪಸ್ಥಿತಿಯನ್ನು ಎದುರಿಸುತ್ತಿರುವಾಗಲೇ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಗುರುವಾರದಿಂದ ರಾಜ್ಕೋಟ್ ನಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ತನ್ನ 100ನೇ ಟೆಸ್ಟ್ ಕ್ಯಾಪ್ ಧರಿಸಲು ಸಜ್ಜಾಗುತ್ತಿದ್ದಾರೆ.
ಹೈದರಾಬಾದ್ ನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಇಂಗ್ಲೆಂಡ್ 28 ರನ್ ನಿಂದ ಜಯ ಸಾಧಿಸಿದರೆ, ವಿಶಾಖಪಟ್ಟಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತವು 106 ರನ್ ನಿಂದ ಜಯ ಗಳಿಸಿ ಐದು ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.
ಇಂಗ್ಲೆಂಡಿನ ಹಿರಿಯ ಸ್ಪಿನ್ನರ್ ಜಾಕ್ ಲೀಚ್ ಮೊಣಕಾಲು ಗಾಯದ ಸಮಸ್ಯೆಯಿಂದಾಗಿ ಕೊನೆಯ 3 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಭಾರತದ ಪಾಳಯದಲ್ಲಿ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ಅನುಪಸ್ಥಿತಿ ಎದ್ದು ಕಾಣುತ್ತಿದೆ.
ಹೈದರಾಬಾದ್ ನಲ್ಲಿ ನಡೆದಿದ್ದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು ಸೋಲಿಸಿದಾಗ ಭಾರತವು ಸ್ವದೇಶದಲ್ಲಿ 2013ರ ನಂತರ ಕೇವಲ ನಾಲ್ಕನೇ ಬಾರಿ ಸೋಲನ್ನು ಕಂಡಿತ್ತು. 32ರ ಹರೆಯದ ಸ್ಟೋಕ್ಸ್ ಅವರ ನಾಯಕತ್ವಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು.
ಸ್ಟೋಕ್ಸ್ ಹಾಗೂ ಕೋಚ್ ಬ್ರೆಂಡನ್ ಮೆಕಲಮ್ ಆಕ್ರಮಣಕಾರಿ ಶೈಲಿಯ ಬೇಝ್ಬಾಲ್ ತಂತ್ರವನ್ನು ಅಳವಡಿಸಿಕೊಂಡ ನಂತರ ಇಂಗ್ಲೆಂಡ್ 20 ಟೆಸ್ಟ್ ಪಂದ್ಯಗಳ ಪೈಕಿ 14ರಲ್ಲಿ ಜಯ ಸಾಧಿಸಿತ್ತು.
ಆಲ್ರೌಂಡರ್ ಸ್ಟೋಕ್ಸ್ ಮೊಣಕಾಲು ಸರ್ಜರಿಯಿಂದ ಚೇತರಿಸಿಕೊಂಡ ನಂತರ ಸರಣಿಯಲ್ಲಿ ಬ್ಯಾಟರ್ ಆಗಿ ಮಾತ್ರ ಆಡುತ್ತಿದ್ದಾರೆ. 2013ರಲ್ಲಿ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟ ನಂತರ ಸ್ಟೋಕ್ಸ್ 6,251 ರನ್ ಗಳಿಸಿದ್ದು, 197 ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಮೊದಲೆರಡು ಟೆಸ್ಟ್ ಪಂದ್ಯಗಳಿಂದ ದೂರವುಳಿದ ನಂತರ ಭಾರತದ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣವನ್ನು ಮುಂದಿಟ್ಟುಕೊಂಡು ಸರಣಿಯ ಇನ್ನುಳಿದ ಪಂದ್ಯಗಳಿಂದಲೂ ಹೊರಗುಳಿದಿದ್ದಾರೆ.
ತಂಡಕ್ಕೆ ನೇಮಿಸಲ್ಪಟ್ಟ ನಂತರ ಸರಣಿಯ ಉಳಿದ ಪಂದ್ಯಗಳಲ್ಲೂ ಆಡಲು ಫಿಟ್ ಇದ್ದಾರೆ ಎಂದು ಹೇಳಲಾಗಿದ್ದ ರಾಹುಲ್ ಮತ್ತೊಮ್ಮೆ ರಾಜ್ಕೋಟ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ರಾಹುಲ್ ಎರಡನೇ ಟೆಸ್ಟ್ ಗೆ ಲಭ್ಯವಿರುವುದಿಲ್ಲ.
*700 ವಿಕೆಟ್ ಕ್ಲಬ್ ಸನಿಹದಲ್ಲಿ ಆ್ಯಂಡರ್ಸನ್
ಇಂಗ್ಲೆಂಡಿನ ಹಿರಿಯ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಗೆ 700 ವಿಕೆಟ್ ಮೈಲಿಗಲ್ಲು ತಲುಪಲು ಇನ್ನು ಕೇವಲ 5 ವಿಕೆಟ್ ಗಳ ಅಗತ್ಯವಿದೆ. ಸ್ಪಿನ್ ಮಾಂತ್ರಿಕರಾದ ಶೇನ್ ವಾರ್ನ್(708 ವಿಕೆಟ್) ಹಾಗೂ ಮುತ್ತಯ್ಯ ಮುರಳೀಧರನ್(800 ವಿಕೆಟ್)ಮಾತ್ರ ಟೆಸ್ಟ್ ಕ್ರಿಕೆಟ್ ನಲ್ಲಿ 700ಕ್ಕೂ ಅಧಿಕ ವಿಕೆಟ್ ಗಳನ್ನು ಪಡೆದಿದ್ದಾರೆ.
ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಪೂರೈಸಲು ಕೇವಲ ಒಂದ ವಿಕೆಟ್ ಅಗತ್ಯವಿದೆ.
42ರ ಹರೆಯದ ಆ್ಯಂಡರ್ಸನ್ ತನ್ನ 185ನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಯುವ ಸ್ಪಿನ್ನರ್ಗಳಾದ ಟಾಮ್ ಹಾರ್ಟ್ಲಿ, ಶುಐಬ್ ಬಶೀರ್ ಹಾಗೂ ರೆಹಾನ್ ಅಹ್ಮದ್ ಒಟ್ಟಿಗೆ ಕೇವಲ 6 ಪಂದ್ಯಗಳನ್ನು ಆಡಿದ್ದಾರೆ.