ವಯನಾಡ್ ಭೂಕುಸಿತ | ವಯನಾಡ್ ನಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಕರೆ ತರಲು ಸಿಎಂ ಮಮತಾ ಬ್ಯಾನರ್ಜಿ ಕ್ರಮ : ಟಿಎಂಸಿ
ಮಮತಾ ಬ್ಯಾನರ್ಜಿ | PC : PTI
ಕೋಲ್ಕತ್ತಾ: ಕೇರಳದ ಭೂ ಕುಸಿತ ಪೀಡಿತ ವಯನಾಡ್ ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ರಾಜ್ಯದ ವಲಸೆ ಕಾರ್ಮಿಕರನ್ನು ಮರಳಿ ಕರೆ ತರಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉಪಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಶನಿವಾರ ತೃಣಮೂಲ ಕಾಂಗ್ರೆಸ್ ಹೇಳಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ತೃಣಮೂಲ ಕಾಂಗ್ರೆಸ್ ಪಕ್ಷ, “ದೀದಿ ಎಲ್ಲರೊಂದಿಗೂ ಇದ್ದಾರೆ, ಎಲ್ಲರ ಪರವಾಗೂ ನಿಲ್ಲಲಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ, ಕೇರಳದಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ರಾಜ್ಯ ಸರಕಾರವು ಎಲ್ಲ ನೆರವಿನ ಖಾತರಿ ಪಡಿಸುತ್ತಿದೆ ಎಂದು ಆಶ್ವಾಸನೆ ನೀಡಿದೆ.
“ಕೇರಳದ ಭೂ ಕುಸಿತ ಪೀಡಿತ ವಯನಾಡ್ ನಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಅಗತ್ಯವಿರುವ ಎಲ್ಲ ನೆರವನ್ನೂ GoWB ಒದಗಿಸಲಿದೆ. ಅವರನ್ನು ಸುರಕ್ಷಿತವಾಗಿ ಪಶ್ಚಿರಮ ಬಂಗಾಳಕ್ಕೆ ಮರಳಿ ಕರೆ ತರುವ ಪ್ರಯತ್ನಗಳ ನೇತೃತ್ವವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಹಿಸಿಕೊಂಡಿದ್ದಾರೆ. ಅವರ ಅಗತ್ಯದ ಸಂದರ್ಭದಲ್ಲಿ ನಾವು ಒಗ್ಗಟ್ಟಾಗಿ ಮತ್ತು ಬಲವಾಗಿ ನಿಲ್ಲುತ್ತೇವೆ” ಎಂದೂ ಹೇಳಿದೆ.
ಇದಕ್ಕೂ ಮುನ್ನ, ಭೂ ಕುಸಿತ ಪೀಡಿತ ವಯನಾಡ್ ಜಿಲ್ಲೆಯಲ್ಲಿ ರಾಜ್ಯದ 242 ವಲಸೆ ಕಾರ್ಮಿಕರು ಸಿಲುಕಿಕೊಂಡಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ರಾಜ್ಯ ಕಾರ್ಮಿಕ ಸಚಿವ ಮೊಲೊಯ್ ಘಟಕ್ ವಿಧಾನಸಭೆಗೆ ತಿಳಿಸಿದ್ದರು.